ಕೇಂದ್ರೀಯ ವಿದ್ಯಾಲಯಗಳಲ್ಲಿ ಧರ್ಮ ಪ್ರಚಾರ:ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಜ.10: ಸರಕಾರಿ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದೂ ಧರ್ಮ ಪ್ರಚಾರಪಡಿಸುವ ಶಾಲಾ ಪ್ರಾರ್ಥನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಉತ್ತರ ನೀಡುವಂತೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದು ಧರ್ಮವನ್ನು ಪ್ರಚಾರಪಡಿಸುವ ಪ್ರಾರ್ಥನೆ ಮಾಡಲು ಅವಕಾಶ ನೀಡಿದ್ದೇಕೆ? ಸರಕಾರಿ ಹಾಗೂ ಅನುದಾನಿತ ಶಾಲೆಗಳು ಯಾವುದೇ ಧರ್ಮವನ್ನು ಪ್ರಚಾರ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಶಾಲಾ ಪ್ರಾರ್ಥನೆಯು ಹಿಂದೂ ಧರ್ಮವನ್ನು ಪ್ರಚಾರಪಡಿಸುವಂತಿದೆ. ಕೇಂದ್ರೀಯ ವಿದ್ಯಾಲಯವನ್ನು ಸರಕಾರ ನಡೆಸುತ್ತಿರುವ ಕಾರಣ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.
2015ರ ಅಂಕಿ-ಅಂಶದ ಪ್ರಕಾರ ಭಾರತದಲ್ಲಿ 1,125 ಹಾಗೂ ವಿದೇಶದಲ್ಲಿ 3 ಕೇಂದ್ರೀಯ ವಿದ್ಯಾಲಯಗಳಿವೆ. ಈ ಶಾಲೆಗಳಲ್ಲಿ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.