ಪ್ರಧಾನಿಗೆ 1000 ಸ್ಯಾನಿಟರಿ ನ್ಯಾಪ್ಕಿನ್ ಕಳುಹಿಸಲಿರುವ ಗ್ವಾಲಿಯರ್ ವಿದ್ಯಾರ್ಥಿಗಳು
ಶೇ. 12 ಜಿಎಸ್ಟಿಗೆ ವಿರೋಧ
ಗ್ವಾಲಿಯರ್, ಜ. 10: ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ವಿಧಿಸಲಾಗಿರುವ ಶೇ. 12 ಜಿಎಸ್ಟಿ ವಿರೋಧಿಸಿ ಗ್ವಾಲಿಯರ್ ನಗರದ ವಿದ್ಯಾರ್ಥಿಗಳ ಗುಂಪೊಂದು ವಿಶಿಷ್ಟ ಅಭಿಯಾನವೊಂದನ್ನು ಆರಂಭಿಸಿದೆ.
ವಿದ್ಯಾರ್ಥಿಗಳು ತಮ್ಮ ಆಗ್ರಹವನ್ನು ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಬರೆದಿದ್ದು, ಹೀಗೆ ಬರೆಯಲಾದ 1000 ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಲಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಕಿರುಕುಳ ತಪ್ಪಿಸಲು ಹಾಗೂ ಮಹಿಳಾ ಸಬಲೀಕರಣವನ್ನು ಆಗ್ರಹಿಸಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ಜನವರಿ 4ರಂದು ಆರಂಭಗೊಂಡ ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಬೆಂಬಲ ದೊರೆತಿದೆ. ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು ಇಲ್ಲವೇ ಈ ಉತ್ಪನ್ನವನ್ನು ಉಚಿತವಾಗಿ ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಸ್ಯಾನಿಟರಿ ನ್ಯಾಪ್ಕಿನ್ ಉಪಯೋಗಿಸದ ಗ್ರಾಮೀಣ ಭಾಗದ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಈ ಉತ್ಪನ್ನದ ದರವನ್ನು ಕಡಿಮೆಗೊಳಿಸುವ ಬದಲು ಅದರ ಮೇಲೆ ಹೆಚ್ಚಿನ ಜಿಎಸ್ಟಿ ವಿಧಿಸಿರುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಸರಕಾರವು ಉಚಿತವಾಗಿ ನ್ಯಾಪ್ಕಿನ್ ಒದಗಿಸಿದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೂ ಬಹಳಷ್ಟು ಪ್ರಯೋಜನಕಾರಿ ಎಂದು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
#MadhyaPradesh: A group of social workers in Gwalior start a campaign encouraging women to write down their views on menstrual hygiene on sanitary napkins to mark their protest against it being placed under 12% GST. pic.twitter.com/1SKIFiuErP
— ANI (@ANI) January 9, 2018