ಧ್ವನಿವರ್ಧಕಗಳ ನೋಂದಣಿ: ಉ.ಪ್ರದೇಶ ಸರಕಾರದ ಸೂಚನೆ

ಲಕ್ನೊ, ಜ.10: ಧ್ವನಿವರ್ಧಕಗಳನ್ನು ನೋಂದಾಯಿಸಲು ಬಯಸುವ ಧಾರ್ಮಿಕ ಸಂಸ್ಥೆಗಳ ಆಡಳಿತವರ್ಗ ಅಥವಾ ಸಾರ್ವಜನಿಕರು ಈ ಕುರಿತ ಅರ್ಜಿ ಫಾರಂಗಳನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳಬಹುದು ಎಂದು ಜಿಲ್ಲಾ ನ್ಯಾಯಾಧಿಕಾರಿ ತಿಳಿಸಿದ್ದಾರೆ.
ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಬಳಸಲಾಗುತ್ತಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕೆಂಬ ಉತ್ತರಪ್ರದೇಶ ಸರಕಾರದ ಆದೇಶದ ಹಿನ್ನೆಲೆಯಲ್ಲಿ ನ್ಯಾಯಾಧಿಕಾರಿ ಈ ಸೂಚನೆ ನೀಡಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಿಂದ ಅರ್ಜಿ ಫಾರಂ ಪಡೆದು ಅದನ್ನು ಭರ್ತಿ ಮಾಡಿ ಅದೇ ಠಾಣೆಗೆ ಮರಳಿಸಬೇಕು. ಅಲ್ಲದೆ ನೋಂದಣಿ ಪ್ರಕ್ರಿಯೆಯ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದರೆ ಇದೇ ಠಾಣೆಯಿಂದ ಪಡೆಯಬಹುದು. ಅರ್ಜಿಯಲ್ಲಿ ತಿಳಿಸಲಾಗಿರುವ ಎಲ್ಲಾ ಅಂಶಗಳನ್ನೂ ಪರಿಗಣಿಸಿದ ಬಳಿಕ ನೋಂದಣಿ ಬಗ್ಗೆ ತೀರ್ಮಾನಿಸಲಾಗುವುದು ಎಂದವರು ತಿಳಿಸಿದ್ದಾರೆ.
ಅನುಮತಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸುತ್ತಿರುವ ಧಾರ್ಮಿಕ ಸಂಸ್ಥೆಗಳು ಅಥವಾ ವ್ಯಕ್ತಿಗಳ ಕುರಿತು ಹೆಚ್ಚುವರಿ ನಗರ ನ್ಯಾಯಾಧಿಕಾರಿಗಳ ಮೂಲಕ ನಡೆಸಲಾಗುತ್ತಿರುವ ಸಮೀಕ್ಷೆಯನ್ನು ತ್ವರಿತಗೊಳಿಸಲಾಗಿದೆ. ಸರಕಾರದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು ಜಿಲ್ಲಾ ನ್ಯಾಯಾಧಿಕಾರಿಗಳು ಪೊಲೀಸರು ಹಾಗೂ ಹೆಚ್ಚುವರಿ ನ್ಯಾಯಾಧಿಕಾರಿಗಳ ಜೊತೆ ಸಭೆ ನಡೆಸಿದರು. ಜನವರಿ 10ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಧ್ವನಿವರ್ಧಕಗಳ ನೋಂದಣಿಗೆ ಜನವರಿ 15 ಅಂತಿಮ ದಿನವಾಗಿದೆ ಎಂದು ಸರಕಾರ ತಿಳಿಸಿದೆ.