ಶಾಲೆಗಳಲ್ಲಿ ಪುಸ್ತಕ ಮಾರಾಟ ನಿಷೇಧಿಸಲು ಒತ್ತಾಯಿಸಿ ಧರಣಿ

ಬೆಂಗಳೂರು, ಜ.10: ಶಾಲೆಗಳಲ್ಲಿ ಪುಸ್ತಕ ಮಾರಾಟ ಹಾಗೂ ಜೆರಾಕ್ಸ್ ಮಾಡುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿತು.
ಶಾಲೆಗಳಿರುವುದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಲಿಸುವುದಕ್ಕೆ. ಆದರೆ, ಇತ್ತೀಚೆಗೆ ಬಹುತೇಕ ಖಾಸಗಿ ಶಾಲೆಗಳು ಪುಸ್ತಕ ಮಾರಾಟ ಮಾಡುವ ಉದ್ಯಮವನ್ನಾಗಿಸಿಕೊಂಡಿವೆ. ಇದರಿಂದ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಪುಸ್ತಕ ಮಾರಾಟಗಾರರು ಕೆಲಸ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಸರಕಾರ ಶಾಲೆಗಳಲ್ಲಿ ಪುಸ್ತಕ ಮಾರಾಟಕ್ಕೆ ನಿರ್ಬಂಧ ಹೇರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎ.ರಮೇಶ್ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಮಂದಿ ಪುಸ್ತಕ ಉದ್ಯಮದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಜಿಎಸ್‌ಟಿ ಜಾರಿಯಿಂದಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಸಾಗುತ್ತಿದ್ದೇವೆ. ಇದರ ಜೊತೆಗೆ ಶಾಲೆಗಳಲ್ಲೇ ಪುಸ್ತಕಗಳನ್ನು ಮಾರಾಟ ಮಾಡುವುದರಿಂದ ಪುಸ್ತಕ ಮಾರಾಟಗಾರರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಹೆಸರಿನಲ್ಲಿ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಪಡೆಯುತ್ತಾರೆ. ಹಾಗೂ ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಗೆ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಪುಸ್ತಕಗಳು ನಮ್ಮ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಸಿಗಲಿವೆ. ಹೀಗಾಗಿ ಶಾಲೆಯ ಮಾಲಕರು ಪುಸ್ತಕ ಮಾರಾಟಗಾರರಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಏಕಕಾಲದಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಲೆಗಳಲ್ಲಿ ಜೆರಾಕ್ಸ್ ಬೇಡ: ಹಲವು ಮಂದಿ ತಮ್ಮ ಜೀವನೋಪಾಯಕ್ಕಾಗಿ ಜೆರಾಕ್ಸ್ ಅಂಗಡಿಗಳನ್ನು ತೆರೆದು ಜೀವನ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳೇ ಜೆರಾಕ್ಸ್ ಅಂಗಡಿಗಳಿಗೆ ಹೆಚ್ಚಿನ ಗ್ರಾಹಕರಾಗಿದ್ದಾರೆ. ಆದರೆ, ಶಾಲೆಗಳಲ್ಲಿಯೇ ಜೆರಾಕ್ಸ್ ಯಂತ್ರಗಳನ್ನು ತೆರೆದಿರುವುದರಿಂದ ರಾಜ್ಯದಲ್ಲಿ ಸಾವಿರಾರು ಮಂದಿ ತಮ್ಮ ಜೀವನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪುಸ್ತಕ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಸತೀಶ್, ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಕೆ.ವಿ.ರಮೇಶ್ ಸೇರಿದಂತೆ ನೂರಾರು ಮಂದಿ ಪುಸ್ತಕ ಮಾರಾಟಗಾರರು ಭಾಗವಹಿಸಿದ್ದರು.







