ಶಿರಾಡಿಯಲ್ಲಿ ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ
ಪೊಲೀಸರಿಂದ ಮುನ್ನೆಚ್ಚರಿಕಾ ಕ್ರಮ
.jpg)
ಉಪ್ಪಿನಂಗಡಿ, ಜ. 10: ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾಂಕರೊಂದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಮಗುಚಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದ್ದು, ಇದರಿಂದ ಗ್ಯಾಸ್ ಸೋರಿಕೆಯುಂಟಾಗಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಅನಿಲ ಸಾಗಾಟ ಮಾಡುತ್ತಿದ್ದಾಗ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೊಡ್ಯಕಲ್ಲು ತಿರುವಿನಲ್ಲಿ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.
ತಕ್ಷಣ ಉಪ್ಪಿನಂಗಡಿ ಪೊಲೀಸರು ಹಾಗೂ ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ಪುತ್ತೂರಿನಿಂದ ಎರಡು ಅಗ್ನಿಶಾಮಕ ವಾಹನಗಳನ್ನು ಕರೆಸಿ, ಅನಿಲ ಸೋರಿಕೆಯಾಗುತ್ತಿರುವಲ್ಲಿ ನೀರು ಹರಿಸಿ, ಪರಿಸರದಲ್ಲಿ ಗ್ಯಾಸ್ ಪಸರಿಸದಂತೆ ತಡೆಯಲಾಯಿತು.
ಮಂಗಳೂರಿನಿಂದ ತಜ್ಞರ ತಂಡ ಆಗಮಿಸಿದ್ದು, ಟ್ಯಾಂಕರ್‌ನಲ್ಲಿರುವ ಸಂಪೂರ್ಣ ಅನಿಲವನ್ನು ಹೊರಗಡೆ ಬಿಡಲು ಶ್ರಮಿಸುತ್ತಿದ್ದು, ಇದು ಗುರುವಾರ ಬೆಳಗ್ಗಿನ ತನಕ ನಡೆಯುವ ಸಾಧ್ಯತೆಯಿದೆ. ಘಟನೆಯಿಂದ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ವೀರಮಣಿ (52) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅನಿಲ ಸೋರಿಕೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಬದಲಾಯಿಸಲಾಗಿದ್ದು, ಜ.11ರ ಬೆಳಗ್ಗಿನ ತನಕ ಬೆಂಗಳೂರಿಗೆ ಹೋಗುವ ವಾಹನಗಳನ್ನು ಬಂಟ್ವಾಳದ ಮೂಲಕ ತಡೆದು ಚಾರ್ಮಾಡಿಯಾಗಿ, ಮಾಣಿಯಲ್ಲಿ ತಡೆದು ಮಡಿಕೇರಿಯಾಗಿ, ಉಪ್ಪಿನಂಗಡಿಯ ಹಳೆಗೇಟು ಬಳಿ ತಡೆದು ಕಡಬ- ಬಿಳಿನೆಲೆ ಕೈಕಂಬ ಮಾರ್ಗವಾಗಿ ಗುಂಡ್ಯದ ಮೂಲಕ ಕಳುಹಿಸಲಾಗುತ್ತಿದೆ.
ಧರ್ಮಸ್ಥಳದಿಂದ ಬರುವ ವಾಹನಗಳನ್ನು ಪೆರಿಯಶಾಂತಿಯ ಬಳಿ ತಡೆದು ಬದಲಿ ಮಾರ್ಗವಾದ ಮರ್ಧಾಳ, ಬಿಳಿನೆಲೆ, ಕೈಕಂಬದ ಮೂಲಕವಾಗಿ ಗುಂಡ್ಯಕ್ಕೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







