ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ‘ವಿವಿ ಪ್ಯಾಟ್’ ಬಳಕೆ: ಉಮೇಶ್ ಸಿನ್ಹಾ ಸ್ಪಷ್ಟಣೆ

ಬೆಂಗಳೂರು, ಜ. 10: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ವಿವಿ ಪ್ಯಾಟ್’ ಬಳಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ಇಂದಿಲ್ಲಿ ಸ್ಪಷ್ಟಣೆ ನೀಡುವ ಮೂಲಕ ಸಂಶಯಗಳಿಗೆ ತೆರೆ ಎಳೆದಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ವಿಧಾನಸಭಾ ಚುನಾವಣೆ ಸಿದ್ದತೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿಗಳು ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದ 224 ಕ್ಷೇತ್ರಗಳಲ್ಲಿಯೂ ‘ವಿವಿ ಪ್ಯಾಟ್’ ಬಳಕೆ ಮಾಡಲಾಗುವುದು. ಈ ಹಿಂದೆ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳಲ್ಲಿ ವಿವಿ ಪ್ಯಾಟ್ ಅಳವಡಿಸಲಾಗಿತ್ತು. ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ದುರ್ಬಳಕೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ರಾಜಕೀಯ ಪಕ್ಷಗಳು ಸೇರಿದಂತೆ ಮತದಾರರಿಗೆ ತಮ್ಮ ಮತ ಯಾರಿಗೆ ಹಾಕಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಈ ಬಗ್ಗೆ ಮತದಾರರಲ್ಲಿ ಪ್ರಾತ್ಯಕ್ಷತೆ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲ ಮತಗಟ್ಟೆಗಳ ಸಂಪೂರ್ಣ ವಿವರಗಳನ್ನೊಳಗೊಂಡ ಡಿಜಿಟಲ್ ಮ್ಯಾಪ್ ಬಳಕೆ ಮಾಡಲಾಗುತ್ತಿದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಲು, ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಲು ಇದು ಉತ್ತಮ ಎಂದು ಹೇಳಿದರು.
ರಾಜ್ಯದಲ್ಲಿ 4.90 ಕೋಟಿ ಮತದಾರರು ಹಕ್ಕು ಪಡೆದಿದ್ದು, ರಾಜ್ಯದಲ್ಲಿ ಒಟ್ಟು 56,694 ಮತಗಟ್ಟೆಗಳ ವಿವರಗಳನ್ನು ಡಿಜಟಲೀಕರಣ ಮಾಡಲಾಗುತ್ತದೆ ಎಂದ ಉಮೇಶ್ ಸಿನ್ಹಾ, ಪ್ರತಿ ಮತಗಟ್ಟೆಗಳ ಸಮೀಪ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಅಳವಡಿಸಲಾಗುತ್ತಿದ್ದು, ಪ್ರತಿಯೊಂದು ಮತಗಟ್ಟೆ ಬಳಿ ವಿಕಲಚೇತನರು, ಅಶಕ್ತರು, ವೃದ್ಧರಿಗೆ ನೆರವಾಗಲು ವ್ಹೀಲ್‌ಛೇರ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ ಎಂದರು.
ಹದ್ದಿನಕಣ್ಣು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದು, ಮತದಾರರಿಗೆ ಆಮಿಷವೊಡ್ಡುವ ಬಗ್ಗೆ ಹಲವು ರಾಜಕೀಯ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ಮೊದಲು ಆಯಾ ರಾಜಕೀಯ ಪಕ್ಷಗಳೇ ಮತದಾರರಿಗೆ ಆಮಿಷವೊಡ್ಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು ಎಂದು ಉಮೇಶ್ ಸಿನ್ಹಾ ಸಲಹೆ ನೀಡಿದರು.
ಕಳೆದ ಚುನಾವಣೆಯಲ್ಲಿ ಶೇ.71ರಷ್ಟು ಮತದಾನವಾಗಿದೆ. ಈ ಬಾರಿ ಶೇ. 100ರಷ್ಟು ಮತದಾನಕ್ಕೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದ ಅವರು, ಹಣ ಸೇರಿದಂತೆ ಇನ್ನಿತರ ವಸ್ತುಗಳ ಆಮಿಷ ತಡೆಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಸುದ್ದಿ ವಾಹಿನಿಗಳು ಹಾಗೂ ಮಾಧ್ಯಮಗಳಲ್ಲಿ ‘ಕಾಸಿಗಾಗಿ ಸುದ್ದಿ’ಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ತಂಡ ರಚನೆ ಮಾಡಲಾಗುವುದು ಎಂದರು.
ಸಿಂಗಲ್ ವಿಂಡೋ ಏಜೆನ್ಸಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಮತದಾರರಿಗೆ ಆಮಿಷ, ಹಣ, ಅಕ್ರಮ ಮದ್ಯ ಸಾಗಾಣೆ ನಿಗಾ ವಹಿಸಲು ಕ್ರಮ ವಹಿಸಲಾಗಿದೆ ಎಂದ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಸಂದೀಪ್ ಸಕ್ಸೇನಾ, ಪ್ರಚಾರಕ್ಕೆ ತೆರಳುವ ಪಕ್ಷಗಳು ಮತ್ತು ಮುಖಂಡರು ಮೊದಲೇ ಆಯೋಗದ ಪರವಾನಿಗೆ ಕಡ್ಡಾಯ. ಅದರಂತೆ ನಿಗದಿತ ಸಮಯದೊಳಗೆ ಪರವಾನಿಗೆ ನೀಡಲು ಕ್ರಮ ಏಕರೂಪದ ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸಂದೀಪ್ ಸಕ್ಸೇನಾ, ದಿಲೀಪ್ ಶರ್ಮಾ, ನಿಖಿಲ್ ಕುಮಾರ್, ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ಎಸೆಸೆಲ್ಸಿ-ಪಿಯುಸಿ ಪರೀಕ್ಷೆ, ಹಬ್ಬಗಳನ್ನು ಪರಿಗಣನೆ ಬಳಿಕ ಮತ್ತೊಮ್ಮೆ ಸಮಾಲೋಚನೆ ನಡೆಸಿ ಚುನಾವಣೆಗೆ ಸೂಕ್ತ ದಿನಾಂಕ ನಿಗದಿಪಡಿಸಲಾಗುವುದು. ಮತದಾನದ ದಿನಾಂಕದ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಚುನಾವಣೆಗೆ ಸಿದ್ಧತೆ ಪೂರ್ಣಗೊಂಡ ಬಳಿಕ ದಿನಾಂಕ ನಿಗದಿಪಡಿಸಲಾಗುವುದು’
-ಉಮೇಶ್ ಸಿನ್ಹಾ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ







