ಮಣಿಹಳ್ಳ: ಮರಕ್ಕೆ ಢಿಕ್ಕಿ ಹೊಡೆದ ಕಾರು; ಇಬ್ಬರು ಮಕ್ಕಳು ಸಹಿತ ಐವರಿಗೆ ಗಾಯ

ಬಂಟ್ವಾಳ, ಜ. 10: ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿಯಾಗಿ ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ ಐವರು ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ಮಣಿಹಳ್ಳ ಸಮೀಪದ ಬಡಗುಂಡಿ ಎಂಬಲ್ಲಿ ನಡೆದಿದೆ.
ಬಡಗುಂಡಿ ನಿವಾಸಿಗಳಾದ ಜರ್ಮನ್, ರೋಶನ್, ಲವಿಟ, ಸಿಸಿಲಿಯಾ ಬರೆಟ್ಟೋ, ಕಾರು ಚಾಲಕ ರೋಬಿನ್, 1 ವರ್ಷದ ಮತ್ತು ಮೂರು ವರ್ಷದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಿಂದ ಗಾಯಗೊಂಡವರಲ್ಲಿ ರೋಶನ್ ವಿದೇಶದಲ್ಲಿ ಉದೋಗ ಮಾಡುತ್ತಿದ್ದು, ರಜೆಯ ನಿಮಿತ್ತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು ಎನ್ನಲಾಗಿದೆ.
ಅವರು ಕುಟುಂಬ ಸಮೇತ ಇಂದು ಮಂಗಳೂರು ಬೀಚ್‌ಗೆ ತೆರಳಿ ವಾಪಸು ಮನೆಗೆ ಬರುತ್ತಿದ್ದ ವೇಳೆ ತಾಲೂಕಿನ ಮಣಿಹಳ್ಳ ಸಮೀಪದ ಬಡಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಮರಕ್ಕೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಠಾಣೆ ಪೋಲಿಸರು ಭೇಟಿ ನೀಡಿದ್ದಾರೆ.





