ಎವರೆಸ್ಟ್ ಮೂಲ ಶಿಬಿರ ತಲುಪಿ ಸಾಧನೆ ಗೈದ ಯುವತಿ

ಲಕ್ನೊ, ಜ.10: ನೆಲಮಟ್ಟಕ್ಕಿಂತ 17,595 ಅಡಿ ಎತ್ತರವಿರುವ ಎವರೆಸ್ಟ್ ಪರ್ವತದ ಮೂಲ ಶಿಬಿರವನ್ನು ಯಶಸ್ವಿಯಾಗಿ ತಲುಪಿರುವ ಲಕ್ನೊದ ಯುವತಿ ಪೂರ್ವ ಧವನ್ ಎಂಬಾಕೆ ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸಾಧನೆ ಮಾಡಿದ್ದಾಳೆ.
ನೇಪಾಲದಲ್ಲಿರುವ ಲಕುಲಾ ಎಂಬಲ್ಲಿಂದ ಡಿ.23ರಂದು ಎವರೆಸ್ಟ್ ಮೂಲ ಶಿಬಿರದತ್ತ ಚಾರಣ ಆರಂಭಿಸಿದ್ದ ಪೂರ್ವ, -32 ಡಿಗ್ರಿ ಸೆಲ್ಶಿಯಸ್‌ಗೆ ತಲುಪಿದ್ದ ತಾಪಮಾನದ ಮಧ್ಯೆಯೂ ಡಿ.31ರಂದು ಮೂಲ ಶಿಬಿರವನ್ನು ತಲುಪಲು ಯಶಸ್ವಿಯಾಗಿದ್ದಳು. 2019ರಲ್ಲಿ ಎವರೆಸ್ಟ್ ಪರ್ವತಾರೋಹಣ ಮಾಡುವ ಗುರಿ ಹೊಂದಿರುವ ಪೂರ್ವ ಧವನ್, ಅದಕ್ಕೂ ಮುನ್ನ ಭಾರತದ ಅತೀ ಎತ್ತರದ ಪರ್ವತವಾದ ಕಾಂಚನಗಂಗವನ್ನು ಏರಲು ಯೋಜನೆ ಹಾಕಿಕೊಂಡಿದ್ದಾಳೆ. ಫೈಝಾಬಾದ್‌ನ ಡಾ ರಾಮ್‌ಮನೋಹರ್ ಲೋಹಿಯಾ ಅವಧ್ ವಿವಿಯಿಂದ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಪೂರ್ವ, ಉತ್ತಮ ಕಥಕ್ ನೃತ್ಯಗಾತಿ. ಉತ್ತರಾಖಂಡದ ‘ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೆನಿರಿಂಗ್’ನಿಂದ ಪರ್ವತಾರೋಹಣದ ಬಗ್ಗೆ ತರಬೇತಿ ಪಡೆದಿದ್ದಾಳೆ.
Next Story