ಸ್ನೇಹಿತನ ಕೊಲೆ ಪ್ರಕರಣ: ಆರೋಪಿ ಬಂಧನ

ಬೆಂಗಳೂರು, ಜ.10: ಸ್ನೇಹಿತನನ್ನೆ ಕೊಲೆಗೈದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ, ಹತ್ತು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ವೈಟ್‌ಫೀಲ್ಡ್ ವಿಭಾಗದ ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಪ್ರದೇಶದ ಕೌಸಂಬಿ ಜಿಲ್ಲೆಯ ಚಾರ್ವ ಠಾಣಾ ವ್ಯಾಪ್ತಿಯ ವಿಕಾಸ್ ಕುಮಾರ್(23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಎರಡು ವರ್ಷಗಳಿಂದ ಆರೋಪಿ ವಿಕಾಸ್ ಮತ್ತು ವಿಪಿನ್ ಬೆಳ್ಳಂದೂರಿನ ವೇಣುಗೋಪಾಲ್‌ರೆಡ್ಡಿ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮನೆಯಲ್ಲೆ ಸಮೋಸ ತಯಾರಿಸಿ, ನಗರದ ವಿವಿಧೆಡೆ ಮಾರಾಟ ಮಾಡಿ, ಬಂದ ಹಣದಲ್ಲಿ ಇಬ್ಬರೂ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಉತ್ತಮ ಭಾಂಧವ್ಯದಲ್ಲಿದ್ದ ಇಬ್ಬರ ನಡುವೆ ಕ್ರಮೇಣ ಹಣಕಾಸಿನ ವಿಚಾರವಾಗಿ ಜಗಳ ಉಂಟಾಗುತ್ತಿತ್ತು. 2017, ಫೆ.4ರಂದು ವ್ಯಾಪಾರದಲ್ಲಿ ಬಂದ ಹಣದಲ್ಲಿ ವಿಪಿನ್ ವಂಚಿಸಿರುವ ಬಗ್ಗೆ ಸಂಶಯಗೊಂಡು ಆತನೊಂದಿಗೆ ಜಗಳ ಮಾಡಿದ ಆರೋಪಿ, ದೊಣ್ಣೆಯಿಂದ ವಿಪಿನ್ ತಲೆಗೆ ಹೊಡೆದು ಕೊಲೆ ಮಾಡಿದ್ದ. ನಂತರ ವಿಪಿನ್ ತಂದೆಗೆ ಕರೆ ಮಾಡಿ ಫಿಟ್ಸ್ಸ್‌ನಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ ಎಂದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ವಿಪಿನ್ ತಂದೆ ಮಗನ ಮೃತದೇಹವನ್ನು ಗಮನಿಸಿದಾಗ ಕೊಲೆ ಮಾಡಿರುವ ಬಗ್ಗೆ ಸಂಶಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಚ್‌ಎಸ್‌ಆರ್‌ಲೇಔಟ್ ಠಾಣೆ ಪೊಲೀಸರು ಬೆಳ್ಳಂದೂರು ಪೊಲೀಸರಿಗೆ ಪ್ರಕರಣ ವರ್ಗಾಯಿಸಿದ್ದರು.
ವಿಪಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ, ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಆರೋಪಿ ಕೊಲೆ ಮಾಡಿದ ಬಳಿಕ ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶದಲ್ಲಿ ಸುತ್ತಾಡಿಕೊಂಡು ತಲೆಮರೆಸಿಕೊಂಡಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು 10 ತಿಂಗಳ ಬಳಿಕ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ನಗರಕ್ಕೆ ತಂದು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







