ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಮೆಹ್ಫಿಲೆ ನಿಸಾ ವಿರೋಧ
ಬೆಂಗಳೂರು, ಜ.10: ಕೇಂದ್ರ ಸರಕಾರವು ಲೋಕಸಭೆಯಲ್ಲಿ ಯಾವುದೆ ಚರ್ಚೆಗೆ ಆಸ್ಪದ ನೀಡದೆ ಏಕಾಏಕಿ ಅನುಮೋದನೆ ಪಡೆದುಕೊಂಡಿರುವ ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಮೆಹ್ಫಿಲೆ ನಿಸಾ ಸಂಘಟನೆಯ ಅಧ್ಯಕ್ಷೆ ಡಾ.ಶಾಯಿಸ್ತಾ ಯೂಸುಫ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬುಧವಾರ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಗುಲಿಸ್ತಾನ್ ಶಾದಿಹಾಲ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಈ ಮಸೂದೆಯ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ. ಸಮುದಾಯದ ವಿಚಾರವಾದಿಗಳು, ವಿಷಯ ತಜ್ಞರು, ಧಾರ್ಮಿಕ ಮುಖಂಡರ ಜತೆಯೂ ಚರ್ಚೆ ನಡೆಸಿಲ್ಲ ಎಂದರು.
ವಿವಾಹ, ವಿಚ್ಛೇದನ ಎಂಬುದು ಸಾಮಾಜಿಕ ವಿಚಾರ, ಇದನ್ನು ಕ್ರಿಮಿನಲ್ ಕಾನೂನಿನಡಿಯಲ್ಲಿ ತರುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರಕಾರವು ಈ ಮಸೂದೆಯನ್ನು ಹಿಂಪಡೆಯದಿದ್ದರೆ ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ನಮ್ಮ ಮನವಿಯನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಕೆಲವೇ ಕೆಲವು ಮಹಿಳೆಯರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲು ಹೋಗಿ ಇಡೀ ಸಮುದಾಯದ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಮಸೂದೆಯನ್ನು ತರಲಾಗಿದೆ. ಶರೀಅತ್‌ನಲ್ಲಿ ಹಸ್ತಕ್ಷೇಪ ನಡೆಸುವ ಆರೆಸೆಸ್ಸ್ ಹಾಗೂ ಬಿಜೆಪಿಯ ಗುಪ್ತ ಕಾರ್ಯಸೂಚಿಯ ಭಾಗ ಇದಾಗಿದೆ ಎಂದು ಅವರು ಅವರು ಹೇಳಿದರು.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ಮಸೂದೆಯನ್ನು ತಂದಿದೆ. ಈ ತಪ್ಪು ನಿರ್ಧಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಶಾಯಿಸ್ತಾ ಯೂಸುಫ್ ತಿಳಿಸಿದರು.
ಡಾ.ಚಮನ್ ಫರ್ಝಾನಾ ಮಾತನಾಡಿ, ತ್ರಿವಳಿ ತಲಾಕ್ ಮಸೂದೆಯನ್ನು ತರುವ ಮೂಲಕ ಮುಸ್ಲಿಮ್ ಸಮುದಾಯದಲ್ಲಿ ಎಲ್ಲರೂ ವಿಚ್ಛೇದನ ನೀಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಶೇ.0.1ರಷ್ಟು ವಿಚ್ಛೇದನದ ಪ್ರಮಾಣ ಕೂಡಾ ಮುಸ್ಲಿಮ್ ಸಮುದಾಯದಲ್ಲಿ ಇಲ್ಲ ಎಂದರು.
ಈ ಅನಾವಶ್ಯಕವಾದ ವಿಷಯವನ್ನು ಜನತೆಯ ಮುಂದಿಡುವ ಮೂಲಕ, ಮುಸ್ಲಿಮ್ ಮಹಿಳೆಯರಲ್ಲಿರುವ ಹಸಿವು, ನಿರುದ್ಯೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ವಿಮುಖಗೊಳಿಸಲಾಗುತ್ತಿದೆ. ಇದರಲ್ಲಿ ರಾಜಕೀಯ ಉದ್ದೇಶವಲ್ಲದೆ ಬೇರೆ ಏನು ಇಲ್ಲ ಎಂದು ಅವರು ಹೇಳಿದರು.
ವಿಚ್ಛೇದನ ನೀಡಿದ ಪತಿಯನ್ನು ಜೈಲಿಗೆ ಕಳುಹಿಸುವ ಆ ಮಹಿಳೆ ಹಾಗೂ ಆಕೆಯ ಮಕ್ಕಳು ನಂತರ ಎಲ್ಲಿಗೆ ಹೋಗಬೇಕು. ಈ ವಿಚಾರದ ಬಗ್ಗೆ ಯಾವುದೆ ಪರಿಹಾರ ಕ್ರಮಗಳ ಕುರಿತು ಚರ್ಚಿಸದೆ ತ್ರಿವಳಿ ತಲಾಕ್ ಮಸೂದೆಯನ್ನು ಜಾರಿಗೆ ತರುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ ಎಂದು ಅವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜುಮ್ಮಾ ಮಸ್ಜಿದ್ ಟ್ರರ್ಸ್ಟ್ ಬೋರ್ಡ್ ಅಧ್ಯಕ್ಷ ಡಾ.ಅನ್ವರ್ ಶರೀಫ್, ಮೆಹ್ಫಿಲೆ ನಿಸಾ ಕಾರ್ಯದರ್ಶಿ ಡಾ.ಮಹನೂರ್ ಝಮಾನಿ, ಹೈಕೋರ್ಟ್ ವಕೀಲೆ ಗೌಹರುನ್ನಿಸಾ, ಬಿಬಿಎಂಪಿ ಮಾಜಿ ಸದಸ್ಯೆ ಪ್ರೊ.ನಾಝ್ನೀನ್ ಬೇಗಂ, ಸಾಮಾಜಿಕ ಕಾರ್ಯಕರ್ತ ಹುಮಾಯೂನ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







