3 ದಿನಗಳಲ್ಲಿ ಮೂರು ಮಕ್ಕಳು ಚಿರತೆಗೆ ಬಲಿ

ಭೋಪಾಲ,ಜ.10: ಪೂರ್ವ ಛಿಂದ್ವಾಡಾದ ಅರಣ್ಯ ಪ್ರದೇಶದಲ್ಲಿ ಚಿರತೆಯು ತಿಂದುಹಾಕಿರುವ 12ರ ಹರೆಯದ ಬಾಲಕನ ಶವವು ಬುಧವಾರ ಪತ್ತೆಯಾಗಿದ್ದು, ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಈ ನರಭಕ್ಷಕ ಚಿರತೆಗೆ ಬಲಿಯಾದ ಮಕ್ಕಳ ಸಂಖ್ಯೆ ಮೂರಕ್ಕೇರಿದೆ.
ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿರುವ ಚಿರತೆಗಾಗಿ ಅರಣ್ಯ ಇಲಾಖೆಯ ಸುಮಾರು 200 ಅಧಿಕಾರಿಗಳು ಮತ್ತು 300-400 ಗ್ರಾಮಸ್ಥರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಝಿರ್ಪಾನಿ ಗ್ರಾಮದ ನಿವಾಸಿಯಾಗಿದ್ದ ಈ ಬಾಲಕ ಮಂಗಳವಾರ ಸಂಜೆ ತನ್ನ ತಾಯಿಯೊಂದಿಗೆ ತಮ್ಮ ಹೊಲಕ್ಕೆ ತೆರಳಿದ್ದಾಗ ಚಿರತೆ ದಾಳಿ ನಡೆಸಿ ಆತನನ್ನು ಅರಣ್ಯದೊಳಗೆ ಎಳೆದೊಯ್ದಿತ್ತು.
ಚಿರತೆಯು ರವಿವಾರ ಬಿಜೊ ಪಠಾರ್‌ನ 10ರ ಹರೆಯದ ಬಾಲಕ ಮತ್ತು ಮೊಹ್ಲಿ ಗ್ರಾಮದ ಐದರ ಹರೆಯದ ಬಾಲಕಿಯನ್ನು ಕೊಂದಿತ್ತು. ಈ ಪೈಕಿ ಬಾಲಕನ ಶವ ಅರ್ಧ ತಿಂದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ತಾಯಿಯೊಂದಿಗೆ ಉರುವಲು ತರಲು ಕಾಡಿಗೆ ತೆರಳಿದ್ದ ಬಾಲಕಿಯನ್ನು ಚಿರತೆಯು ಕೊಂದು ಅಲ್ಲಿಯೇ ಬಿಟ್ಟು ಪರಾರಿಯಾಗಿತ್ತು. ಈ ಎಲ್ಲ ಮೂರೂ ಗ್ರಾಮಗಳು ಛಿಂಡಿ ಅರಣ್ಯದ ವ್ಯಾಪ್ತಿಯಲ್ಲಿವೆ.