ಬೀಫ್ ಆಮದು ತಡೆಯುವವರ ವಿರುದ್ಧ ಕಠಿಣ ಕ್ರಮ: ಮನೋಹರ್ ಪಾರಿಕ್ಕರ್ ಎಚ್ಚರಿಕೆ

ಪಣಜಿ, ಜ. 10: ಯಾರಾದರೂ ಬೀಫ್ ಆಮದಿನ ಮಧ್ಯ ಪ್ರವೇಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಎಚ್ಚರಿಸಿದ್ದಾರೆ. ನಕಲಿ ಗೋರಕ್ಷಕರಿಂದ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಮಾಂಸ ವ್ಯಾಪಾರಸ್ಥರು ನಡೆಸುತ್ತಿದ್ದ ಪ್ರತಿಭಟನೆ ಹಿಂದೆಗೆದ ಒಂದು ದಿನದ ಬಳಿಕ ಪಾರಿಕ್ಕರ್ ಈ ಹೇಳಿಕೆ ನೀಡಿದ್ದಾರೆ. ರಾಜ್ಯದ ಗಡಿಯಾದ ಕರ್ನಾಟಕದ ಬೆಳಗಾವಿಯಿಂದ ಬೀಫ್ ಆಮದು ಮಾಡುವ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಸುವುದಕ್ಕೆ ಅವಕಾಶ ನೀಡಲಾರೆವು ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಮಾಂಸ ವ್ಯಾಪಾರಸ್ಥರು ತಮ್ಮ ನಾಲ್ಕು ದಿನಗಳ ಪ್ರತಿಭಟನೆಯನ್ನು ಮಂಗಳವಾರ ಹಿಂದೆಗೆದಿದ್ದಾರೆ.ಮಾಂಸ ವ್ಯಾಪಾರಸ್ಥರ ಪ್ರತಿಭಟನೆ ಗೋವಾದಲ್ಲಿ ಬೀಫ್ ಕೊರತೆಗೆ ಕಾರಣವಾಗಿತ್ತು.
ರಾಜ್ಯದ ಗಡಿ ಭಾಗದಲ್ಲಿ ಅಕ್ರಮ ಕಸಾಯಿ ಖಾನೆಗಳಲ್ಲಿ ಗೋವು ಕಡಿಯಲಾಗುತ್ತಿದೆ ಎಂದು ಪ್ರತಿಪಾದಿಸಿ ಕರ್ನಾಟಕದಿಂದ ಬೀಫ್ ಸಾಗಿಸುತ್ತಿದ್ದ ಟ್ರಕ್‌ಗಳನ್ನು ಸರಕಾರೇತರ ಸಂಸ್ಥೆಯಾಗಿರುವ ಗೋವು ರಕ್ಷ ಅಭಿಯಾನ ಗುರಿಯಾಗಿರಿಸಿತ್ತು. ದಾಳಿ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ನಾನು ಪೊಲೀಸರಿಗೆ ಸೂಚಿಸಿದ್ದೇನೆ. ಕಾನೂನು ಪ್ರಕಾರ ಸರಿಯಾದ ದಾಖಲೆ ಹಾಗೂ ಬಿಲ್ ಇದ್ದರೆ, ನೀವು ಯಾರೊಬ್ಬರೂ ಬೀಫ್ ಆಮದು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಾರಿಕ್ಕರ್ ಹೇಳಿದ್ದಾರೆ. ರಾಜ್ಯದ ಗಡಿಯಲ್ಲಿ ಬೀಫ್‌ಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕು ಎಂದು ಪಾರಿಕ್ಕರ್ ಸೂಚಿಸಿದ್ದಾರೆ. ಎಲ್ಲವೂ ಸಮರ್ಪಕವಾಗಿದೆ. ಯಾರೊಬ್ಬರೂ ಮಧ್ಯಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಮನೋಹರ್ ಪಾರಿಕ್ಕಾರ್ ತಿಳಿಸಿದ್ದಾರೆ.