ಹೊಸ ತಾಲೂಕು ಕೇಂದ್ರವಾಗಿ ಹನೂರು ಅಸ್ತಿತ್ವಕ್ಕೆ: ಸಿದ್ದರಾಮಯ್ಯ ಘೋಷಣೆ

ಹನೂರು,ಜ.10: ಹನೂರು ಪಟ್ಟಣ ಇದೇ ಜನವರಿ ತಿಂಗಳಿಂದ ಹೊಸ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಹನೂರು ಕ್ಷೇತ್ರ ವ್ಯಾಪ್ತಿಯ ಜನತೆಯ ಮುಂದೆ ಸಿ ಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ಧ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 35 ವರ್ಷದ ಬೇಡಿಕೆಯಾದ ಹನೂರು ತಾಲೂಕು ರಚನೆಯಾಗಿರಲಿಲ್ಲ. ಇದರಿಂದ ಈ ಭಾಗದ ಜನತೆ ಕೊಳ್ಳೇಗಾಲಕ್ಕೆ ಅಲೆಯುವಂತಾಗಿತ್ತು. ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಆಗಾಗಿ ರಾಜ್ಯದಲ್ಲಿನ 50 ಹೋಬಳಿ ಕೆಂದ್ರಗಳನ್ನು ಸರ್ಕಾರ ಈಗಾಗಲೇ ತಾಲೂಕನ್ನಾಗಿ ಘೋಷಣೆ ಮಾಡಿದ್ದು, ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ದಿಸೆಯಲ್ಲಿ ಹನೂರನ್ನು ತಾಲೂಕಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಕೊಳ್ಳೇಗಾಲದಿಂದ ಹನೂರು ಪ್ರತ್ಯೇಕವಾಗಲಿದೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಅಗತ್ಯ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಕ್ಷೇತ್ರದ ಶಾಸಕ ಆರ್. ನರೇಂದ್ರ ಅವರು ಕ್ರೀಯಾಶೀಲವುಳ್ಳವರು. ಕೆಲವು ಶಾಸಕರು ನನ್ನನ್ನು ನೋಡಲು ಸುಮ್ಮನೇ ಬರುತ್ತಾರೆ. ಆದರೆ ನರೇಂದ್ರ ಅವರು ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಕಾರ್ಯಗಳನ್ನು ಮಂಜೂರು ಮಾಡಿಸಿಕೊಳ್ಳುವುದರ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬರುತ್ತಿದ್ದರು. ಆಗಾಗಿ ಇವರು ಕೆಲಸಗಳನ್ನು ಇದುವರೆಗೂ ಎಲ್ಲವನ್ನೂ ಮಾಡಿಕೊಟ್ಟಿದ್ದೇನೆ. ಅಲ್ಲದೇ ಕಳೆದ 6 ತಿಂಗಳ ಇವರ ಸತತ ಪ್ರಯತ್ನದ ಫಲವಾಗಿ ಕ್ಷೇತ್ರದ 291 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು 430 ಕೋಟಿ ರೂ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ. ಅಲ್ಲದೇ ಕ್ಷೇತ್ರದ ರಾಮನಗುಡ್ಡೆ, ಹುಬ್ಬೆಹುಣಸೇ ಹಾಗೂ ಗುಂಡಾಲ್ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಆದಷ್ಟು ಬೇಗ ಅನುಷ್ಟಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಮಹದೇವಪ್ರಸಾದ್ ಅವರ ಕನಸು ನನಸು: ಮಲೆಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರರ ಪ್ರತಿಮೆ ನಿರ್ಮಾಣ ಸಚಿವರಾಗಿದ್ದ ದಿ. ಹೆಚ್.ಎಸ್ ಮಹದೇವಪ್ರಸಾದ್ ಅವರ ಕನಸಾಗಿತ್ತು. ಈ ದಿಸೆಯಲ್ಲಿ ಅವರು ಪ್ರಾಧಿಕಾರದ ವತಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಆದರೆ ಅದೃಷ್ಠವಶಾಹತ್ ಅವರು ಅಕಾಲಿಕ ಮರಣಕ್ಕೆ ತುತ್ತಾದರು. ಇದರಿಂದ ಮಹದೇಶ್ವರ ಪ್ರತಿಮೆ ನಿರ್ಮಿಸಲು ತೊಡಕಾಗಿ ಪರಿಣಮಿಸಿತ್ತು. ಇದೀಗ 20 ಕೋಟಿ ರೂ ವೆಚ್ಚದಲ್ಲಿ ಮ.ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದ್ದು, ಮಹದೇವಪ್ರಸಾದ್ ಕನಸು ನನಸಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಆರ್. ನರೇಂದ್ರ ಮಾತನಾಡಿ, ದಿ. ರಾಜುಗೌಡರ 35 ವರ್ಷದ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದ್ದು, ಹನೂರು ತಾಲೂಕು ಅಧಿಕೃತವಾಗಿ ಘೋಷಣೆಯಾಗಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಸಂದ ಗೌರವ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ರಾಜ್ಯದಲ್ಲಿಯೇ 29,981 ಮಂದಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಮೂಲಕ ಹನೂರು ಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 6 ಕೋಟಿ ರೂ ವೆಚ್ಚದಲ್ಲಿ ರಾಮಾಪುರ- ದಿನ್ನಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ, 8 ಕೋಟಿ ರೂ ವೆಚ್ಚದಲ್ಲಿ ಹನೂರು-ರಾಮಾಪುರ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ. ನಾಲ್‍ರೋಡ್‍ನಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ, 33.73 ಕೋಟಿ ರೂ ವೆಚ್ಚದಲ್ಲಿ ಪಾಳ್ಯ ಹಾಗೂ ರಾಮಾಪುರದಲ್ಲಿ ಇಂದಿರಾ ಶಾಲೆ ನಿರ್ಮಾಣ, 2 ಕೋಟಿ ರೂ ವೆಚ್ಚದಲ್ಲಿ ಹನೂರು ಪ್ರಥಮ ದರ್ಜೇ ಕಾಲೇಜು ಕಟ್ಟಡ ನಿರ್ಮಾಣ, 1.5 ಕೋಟಿ ರೂ ವೆಚ್ಚದಲ್ಲಿ ಲಾಸರ್‍ದೊಡ್ಡಿಯಲ್ಲಿ ಚೆಕ್‍ಡ್ಯಾಂ ನಿರ್ಮಾಣ, 5 ಕೋಟಿ ರೂ ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ, 2.99 ಕೋಟಿ ರೂ ವಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ನಿರ್ಮಾಣ. 4.5 ಕೋಟಿ ರೂ ವೆಚ್ಚದಲ್ಲಿನ ಸಿಸಿ ರಸ್ತೆ ನಿರ್ಮಾಣ. 1.37 ಕೋಟಿ ರೂ ವೆಚ್ಚದಲ್ಲಿ ಹನೂರು-ಮ.ಬೆಟ್ಟ ಮುಂದುವರಿದ ರಸ್ತೆ ಅಭಿವೃದ್ಧಿ. 3.70 ಕೋಟಿ ರೂ ವೆಚ್ಚದಲ್ಲಿ ಹೂಗ್ಯಂ ಮೊರಾರ್ಜಿ ಶಾಲೆಯಲ್ಲಿ ಕಟ್ಟಡ ನಿರ್ಮಾಣ. 108 ಕೋಟಿ ರೂ ವೆಚ್ಚದಲ್ಲಿ ಕೆ.ಶಿಫ್ ಯೋಜನೆಯಡಿಯ ಕೊಳ್ಳೇಗಾಲ-ಹನೂರು ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದರು. ಅಲ್ಲದೇ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ. ಡಾ. ಗೀತಾ ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ್, ಕಾಡ ಅಧ್ಯಕ್ಷ ನಂಜಪ್ಪ, ಜಿಪಂ ಅಧ್ಯಕ್ಷ ರಾಮಚಂದ್ರು, ಜಿಪಂ ಸದಸ್ಯರಾದ ಮರಗದಮಣಿ, ಡಿ.ಲೇಖಾ, ತಾಪಂ ಅಧ್ಯಕ್ಷ ಆರ್. ರಾಜು ಸದಸ್ಯ ಜವಾದ್ ಆಹಮದ್, ಪಪಂ ಉಪಾಧ್ಯಕ್ಷ ಬಸವರಾಜು, ಜಿಲ್ಲಾಧಿಕಾರಿ ರಾಮು ಹಾಗೂ ಇನ್ನಿತರರಿದ್ದರು.







