2017ರಲ್ಲಿ ಸೇನೆಯಿಂದ 138 ಪಾಕ್ ಯೋಧರ ಹತ್ಯೆ

ಹೊಸದಿಲ್ಲಿ, ಜ. 10: ಜಮ್ಮು ಹಾಗೂ ಕಾಶ್ಮೀರದಲ್ಲಿ 2017ರಲ್ಲಿ ಶೋಧ ಕಾರ್ಯಾಚರಣೆ ಹಾಗೂ ಗಡಿ ನಿಯಂತ್ರಣ ರೇಖೆಗುಂಟ ಗಡಿಯಾಚೆಗಿನ ಗುಂಡಿನ ದಾಳಿಗೆ ಪ್ರತಿದಾಳಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಸೇನೆಯ 138 ಯೋಧರನ್ನು ಹತ್ಯೆಗೈದಿದೆ ಎಂದು ಸರಕಾರದ ಬೇಹುಗಾರಿಕೆ ಮೂಲಗಳು ಮಂಗಳವಾರ ತಿಳಿಸಿದೆ. ಇದೇ ಅವಧಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಯ 28 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸಾಮಾನ್ಯವಾಗಿ ತನ್ನ ಯೋಧರು ಹತರಾದಾಗ ಬಹಿರಂಗಪಡಿಸುವುದಿಲ್ಲ. ಬದಲಾಗಿ ಅದು ನಾಗರಿಕರು ಹತರಾಗಿರುವುದು ಎಂದು ಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವರ್ಷಗಳಿಂದ ಕದನ ವಿರಾಮ ಉಲ್ಲಂಘನೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಭಾರತೀಯ ಸೇನೆ ಕಠಿಣ ಕ್ರಮ ತೆಗೆದುಕೊಂಡಿದೆ. 2017ರಲ್ಲಿ ಶೋಧ ಕಾರ್ಯಾಚರಣೆ ಹಾಗೂ ಗಡಿ ನಿಯಂತ್ರಣ ರೇಖೆಗುಂಟ ಗಡಿಯಾಚೆಗಿನ ಗುಂಡಿನ ದಾಳಿಗೆ ಪ್ರತಿದಾಳಿಯಲ್ಲಿ ಪಾಕಿಸ್ತಾನ ಸೇನೆಯ 138 ಯೋಧರು ಮೃತಪಟ್ಟಿದ್ದಾರೆ ಹಾಗೂ 155 ಯೋಧರು ಗಂಭೀರ ಗಾಯಗೊಂಡಿದ್ದಾರೆ ಎಂದು ಬೇಹುಗಾರಿಕೆ ಮೂಲಗಳು ತಿಳಿಸಿವೆ. ಗಡಿಯಾಚೆಗಿನ ಗುಂಡಿನ ದಾಳಿ ಹಾಗೂ ಇತರ ಘಟನೆಗಳಲ್ಲಿ ಒಟ್ಟು 70 ಭಾರತೀಯ ಯೋಧರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಸೇನೆಯ ಪ್ರತಿ ಕದನ ವಿರಾಮ ಉಲ್ಲಂಘನೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಅದು ಮುಂದುವರಿಯಲಿದೆ ಎಂದು ಸೇನೆ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.