ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಮನವಿ

ಬೆಂಗಳೂರು, ಜ. 10: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಸಾರ್ವಜನಿಕರು ಪರಿಶೀಲಿಸಿ, ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆಗೊಳಿಸಲು ಈಗಲೇ ಅರ್ಜಿ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಕೋರಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಚುನಾವಣಾ ಆಯೋಗ ಮತದಾರರ ನೆರವಿಗೆ ರೂಪಿಸಿರುವ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಕ್ಷೇತ್ರ ಹಾಗೂ ಮತಗಟ್ಟೆಗಳ ವಿವರಗಳನ್ನು ತಿಳಿದುಕೊಳ್ಳಬೇಕು ಎಂದರು.
KAEPIC ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೋದಿಸಿ 97319 79899 ಸಂಖ್ಯೆಗೆ ಎಸ್‌ಎಂಎಸ್ ರವಾನಿಸಿದರೆ ಮತದಾರರ ಮಾಹಿತಿ ದೊರೆಯಲಿದೆ. ಅಲ್ಲದೆ, ಮೊಬೈಲ್ ಆ್ಯಪ್ ಮೂಲಕವೂ ಮತದಾರರು ತಮ್ಮ ಮಾಹಿತಿ ಪಡೆಯಬಹುದು ಎಂದರು. ಮತದಾರರು ಮುಂಚಿತವಾಗಿಯೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಂಡಲ್ಲಿ ಕೊನೆಕ್ಷಣದ ಗೊಂದಲಗಳಿಗೆ ಆಸ್ಪದ ಇರುವುದಿಲ್ಲ ಎಂದ ಅವರು, 2018ರ ಜನವರಿ 1ಕ್ಕೆ 18ವರ್ಷ ತುಂಬಿದ ಎಲ್ಲರೂ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಚುನಾವಣಾ ಆಯೋಗದ ಘೋಷ ವಾಕ್ಯ No Voter to be left behind ಅನ್ವಯ ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕೆನ್ನುವ ಆಶಯದೊಂದಿಗೆ ಆಯೋಗವು ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಚರ್ಚೆ ನಡೆಸಿದೆ ಎಂದರು.
ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತದಾರರಿಗೆ ಯಾವುದೇ ಪ್ರಭಾವ ಬೀರುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದ ಅವರು, ಈ ಬಾರಿಯ ಮತದಾರರ ದಿನಾಚರಣೆ ವಿಷಯ ಜನಸ್ನೇಹಿ ಚುನಾವಣೆ ಆಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದರು
‘ಪ್ರತಿಯೊಬ್ಬ ಅಭ್ಯರ್ಥಿಗೆ ಈ ಚುನಾವಣೆಯಲ್ಲಿ 28 ಲಕ್ಷ ರೂ.ವೆಚ್ಚ ನಿಗದಿಪಡಿಸಲಾಗಿದೆ. ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು ಸಂಚಾರಿ ವಿಚಕ್ಷಣಾ ತಂಡಗಳು ಹಾಗೂ ಮೂರು ವಿಚಕ್ಷಣಾ ತಂಡಗಳನ್ನು ಪ್ರತಿ ಕ್ಷೇತ್ರದಲ್ಲಿ ಸ್ಥಾಪಿಸುವಂತೆ ಸೂಚಿಸಲಾಗಿದೆ. ವಿಮಾನ ನಿಲ್ದಾಣ, ರಾಜ್ಯದ ಗಡಿ ಭಾಗಗಳಲ್ಲಿಯೂ ಆದಾಯ ತೆರಿಗೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು’
-ದಿಲೀಪ್ ಶರ್ಮಾ ಕೇಂದ್ರ ಚುನಾವಣಾ ಆಯೋಗದ ಡಿಜಿ
‘ಅಭ್ಯರ್ಥಿಗಳ ಚುನಾವಣಾ ವೆಚ್ಚ ಗರಿಷ್ಠ ಮಿತಿ 7.50ಲಕ್ಷ ರೂ.ನಿಂದ 2014ರಲ್ಲಿ ಪರಿಷ್ಕರಣೆ ಮಾಡಿದ್ದು, 28ಲಕ್ಷ ರೂ.ನಿಗದಿಪಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 2013ರಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿತ್ತು. ಹೀಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚ 28 ಲಕ್ಷ ರೂ.ನಿಗದಿಪಡಿಸಲಾಗಿದೆ’







