ಮಂಗಳೂರು ಮಹಾ ನಗರಪಾಲಿಕೆ: ಜ.17ರಂದು ನೀರು ಇಲ್ಲ
ಮಂಗಳೂರು, ಜ.10: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಜ.17ರಂದು ಪೂರ್ವಾಹ್ನ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾ ನಗರಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.
ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್‌ವೆಲ್‌ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‌ವೆಲ್‌ನ್ನು ಶುಚಿಗೊಳಿಸಲು ಹಾಗೂ ಕೊಟ್ಟಾರ ಚೌಕಿ ಹೋಂಡಾ ಶೋ ರೂಂ ಎದುರು ಬದಿ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ ಸೋರಿಕೆ ಉಂಟಾಗಿದ್ದು ಇದರ ದುರಸ್ತಿ ಕಾರ್ಯವನ್ನು ಅಂದು ಪೂರ್ವಾಹ್ನ ಗಂಟೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಅವಧಿಯಲ್ಲಿ ಮಂಗಳೂರು ನಗರ ಭಾಗಶಃ ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಆಯುಕ್ತರ ಪ್ರಕಟನೆ ತಿಳಿಸಿದೆ.





