ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುವ ವೇಳೆ ಮೃತಪಟ್ಟರೆ ಅಧಿಕಾರಿಗಳೇ ನೇರ ಹೊಣೆ: ಜಗದೀಶ್ ಹಿರೇಮಣಿ
ಬೆಂಗಳೂರು, ಜ. 10: ಒಳಚರಂಡಿ, ಶೌಚಗುಂಡಿ ನಿರ್ವಹಣೆಗೆ ಮಾನವರನ್ನು ಬಳಕೆ ಮಾಡಬಾರದೆಂಬ ಆದೇಶವಿದ್ದರೂ ಬೆಂಗಳೂರಿನಂತಹ ಪ್ರಗತಿಶೀಲ ನಗರದಲ್ಲಿ 63 ಮಂದಿ ಪೌರ ಕಾರ್ಮಿಕರು ಸಾವನ್ನಪ್ಪಿರುವುದು ಆತಂಕದ ಸಂಗತಿ ಎಂದು ಸಫಾಯಿ ಕರ್ಮಚಾರಿ ಆಯೋಗದ ರಾಷ್ಟ್ರೀಯ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಬೇಸರ ವ್ಯಕ್ತಪಡಿಸಿದ್ದಾರೆ.
63 ಮಂದಿ ಸಾವನ್ನಪ್ಪಿದ್ದರೂ ಇಂತಹ ಅವಘಡಗಳಿಗೆ ಕಾರಣವಾದ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಕಾಯ್ದೆ ಪ್ರಕಾರ ಇಂತಹ ಅನಾಹುತಗಳಿಗೆ ಕಾರಣರಾಗುವವರಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಲು ಅವಕಾಶವಿದ್ದು ಆ ರೀತಿ ಮಾಡಿದಲ್ಲಿ ಪ್ರಕರಣಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದರು.
ಬುಧವಾರ ಇಲ್ಲಿನ ಸೋಮಸುಂದರಪಾಳ್ಯ ವಸತಿ ಸಮುಚ್ಛಯದಲ್ಲಿ ಜ.7ರಂದು ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಮೂರು ಮಂದಿ ಕಾರ್ಮಿಕರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಂತಹ ಪ್ರಕರಣಗಳು ಪುನರಾವರ್ತನೆಯಾದರೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಸೆಪ್ಟಿಕ್ ಟ್ಯಾಂಕ್, ಸೋಕ್ ಪಿಟ್ ವ್ಯವಸ್ಥೆ ಇರುವ ಸಾವಿರಾರು ಕಟ್ಟಡಗಳು ನಗರದಲ್ಲಿ ಇವೆ. ಇವುಗಳ ನಿರ್ವಹಣೆ ಯಾವ ರೀತಿ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜಿಲ್ಲಾಧಿಕಾರಿಗಳ ವ್ಯಾಪ್ತಿ ಪ್ರದೇಶದಲ್ಲಿ ಇರುವ ಕಟ್ಟಡಗಳ ಸಮೀಕ್ಷೆ ಆಗಬೇಕು. ಅಂತಹವುಗಳ ಮುಂದೆ ಫಲಕ ಹಾಕಿ ಜಾಗೃತಿ ಮೂಡಿಸಬೇಕು. ಕಟ್ಟಡಗಳಿಗೆ ಪರವಾನಿಗೆ ನೀಡುವ ಬಿಡಿಎ, ಬಿಬಿಎಂಪಿ ಮತ್ತು ಜಲಮಂಡಳಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು.
ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ರಾಷ್ಟ್ರೀಯ ಆಯೋಗದ ಸದಸ್ಯನಾಗಿ ನಾನು ಪೊಲೀಸರಿಗೆ ಇಂತಹ ಅಪರಾಧಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸಲು ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.
ಮೃತರ ಕುಟುಂಬಗಳಿಗೆ ನೀಡಲಾಗುವ 10ಲಕ್ಷ ರೂ.ಪರಿಹಾರದ ಜೊತೆಗೆ ಅವರ ಕುಟುಂಬಗಳಿಗೆ ವಸತಿ ವ್ಯವಸ್ಥೆ, ಉದ್ಯೋಗ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸ ವ್ಯವಸ್ಥೆಯೂ ಆಗಬೇಕು. ಕುಟುಂಬಕ್ಕೆ ನೀಡುವ ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರಿಕೆ ಕ್ರಮಕ್ಕೂ ಅವರು ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವಿ.ಶಂಕರ್, ಜಿಲ್ಲಾಡಳಿತದಿಂದ ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ನಿರ್ವಹಣೆ, ಸಂಬಂಧಿಸಿದ ಕಾಯ್ದೆ, ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಖ್ಯಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಾಗಿದೆ. ಕಾರ್ಯಾಗಾರಕ್ಕೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳುಗೆ ವಸತಿಗಳನ್ನು ನಿರ್ಮಿಸಿ ಕೊಡುವುದಾದಲ್ಲಿ ಅದಕ್ಕೆ ಅಗತ್ಯವಾದ ಜಾಗವನ್ನು ಜಿಲ್ಲಾಡಳಿತದಿಂದ ಒದಗಿಸಿ ಕೊಡುವ ಆಶ್ವಾಸನೆ ನೀಡಿದ ಅವರು, ಸಂತ್ರಸ್ಥರ ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶಿಕ್ಷಣಕ್ಕೂ ವ್ಯವಸ್ಥೆ ಮಾಡಿಕೊಲಾಗುವುದು ಎಂದರು.
ಸೋಮಸುಂದರಪಾಳ್ಯ ವಸತಿ ಸಂಕೀರ್ಣದಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಪರಿಶೀಲನೆ ವರದಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಕ್ಷಣ್ ರೆಡ್ಡಿ, ವಸತಿ ಸಂರ್ಕೀಣವು ಬಿಡಿಎ ಅನುಮೋದನೆ ಪಡೆದ ಕಟ್ಟಡವಾಗಿದ್ದು 2010ರಲ್ಲಿ ಪೂರ್ಣಗೊಂಡಿದೆ. ಮಾಲಕ ಎಲ್ಲ ಮನೆಗಳನ್ನು ಮಾರಾಟ ಮಾಡಿದ್ದು, ಮಾಲಕನ ಬಳಿ ಯಾವುದೇ ಹಕ್ಕು ಉಳಿದಿರುವುದಿಲ್ಲ. ವಸತಿದಾರರ ಒಕ್ಕೂಟ ಕಟ್ಟಡ ನಿವಾರ್ಹಣೆ ಮಾಡುತ್ತಿದ್ದು, ಅದು ನೋಂದಣಿಯಾಗಿರುವುದಿಲ್ಲ. ಎಸ್‌ಟಿಪಿ ಸ್ವಚ್ಚ ಕಾರ್ಯವನ್ನು ಯಾವುದೇ ತಾಂತ್ರಿಕ ಅನುಭವವಿಲ್ಲದ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಇಬ್ಬರು ಕೆಲಸಗಾರರ ಜೊತೆ ಕೈಗೊಂಡಿದ್ದು ತಪಾಸಣೆಯಲ್ಲಿ ತಿಳಿದುಬಂದಿದೆ. ಖಾಸಗಿ ಸಂಕೀರ್ಣವಾದ್ದರಿಂದ ಪರಿಹಾರದ ವೆಚ್ಚವನ್ನು ಅವರಿಂದಲೆ ಭರಿಸಲಿದ್ದು ತತ್‌ಕ್ಷಣದಲ್ಲಿ ಪರಿಹಾರವಾಗಿ ತಲಾ 10ಲಕ್ಷ ರೂ.ಹಣವನ್ನು ಮೂವರು ಸಂತ್ರಸ್ತ ಕುಟುಂಬಗಳಿೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿನ ಅಮಿತ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







