ಜ. 14ರಂದು ಕಾಪು-ಹೆಜಮಾಡಿ ಜನಜಾಗೃತಿಗಾಗಿ ಸೈಕಲ್ ಜಾಥಾ
ಪಡುಬಿದ್ರಿ, ಜ. 10: ತಂಬಾಕು, ರಸ್ತೆ ಸುರಕ್ಷತೆ, ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಜ.14 ರಂದು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರ ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ರಮೀರ್ ಹುಸೇನ್ ಮಾಹಿತಿ ನೀಡಿದರು
ಬೆಳಗ್ಗೆ 7.30ಕ್ಕೆ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಆವರಣದಿಂದ ಆರಂಭಗೊಂಡು ಹೆಜಮಾಡಿಯಲ್ಲಿ ಸೈಕಲ್ ಜಾಥಾ ಮುಕ್ತಾಯವಾಗಲಿದೆ. ಜಾಥಾಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚಾಲನೆ ನೀಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನವಣೆ, ವೃತ್ತ ನಿರೀಕ್ಷಕ ಹಾಲಮೂರ್ತಿ, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಪಾಲ್ಗೊಳ್ಳುವರು ಎಂದು ಸುಮಾರು 15 ಕಿ.ಮೀ. ಸೈಕಲ್ ಜಾಥಾವು ಕಾಪುವಿನಿಂದ ಆರಂಭಗೊಂಡು, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಮೂಲಕ ಹೆಜಮಾಡಿಯ ಟೋಲ್‌ಗೇಟ್ ಮೂಲಕ ಹೆಜಮಾಡಿ ತಲುಪಲಿದೆ.
ಉಚ್ಚಿಲ ಮತ್ತು ಪಡುಬಿದ್ರಿಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಹೆಜಮಾಡಿ ಟೋಲ್‌ಗೇಟ್‌ನಿಂದ ಹೆಜಮಾಡಿ ಪೇಟೆಯವರೆಗೆ ಒಂದು ಕಿ.ಮೀ. ನಡಿಗೆ ನಡೆಯಲಿದೆ. ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈಗಾಗಲೇ 400 ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿದ್ದಾರೆ.
ಹೆಜಮಾಡಿ ಗ್ರಾಮ ಪಂ. ಆವರಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಟಿಯರು ಪಾಲ್ಗೊಳ್ಳಲಿದ್ದು, ಕಡೂರು ಶಾಸಕ ವೈ.ಎಸ್.ವಿ ದತ್ತಾ, ಕಾಪು ಶಾಸಕ ವಿನಯಕುಮಾರ್ ಸೊರಕೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಕಾರ್ಯಕ್ರಮ ನಿರ್ದೇಶಕ ಸಂತೋಷ್ ಪಡುಬಿದ್ರಿ, ಅಬ್ದುಲ್ ಹಮೀದ್, ಕರುಣಾಕರ ನಾಯಕ್, ಸುಧಾಕರ್ ಇದ್ದರು.







