ಕೆ.ಶಿವನ್ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ

ಹೊಸದಿಲ್ಲಿ, ಜ.10: ವಿಕ್ರಮ್ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿರುವ ರಾಕೆಟ್ ವಿಜ್ಞಾನಿ ಕೆ.ಶಿವನ್ ಅವರನ್ನು ಬಾಹ್ಯಾಕಾಶ ಇಲಾಖೆಯ ನೂತನ ಕಾರ್ಯದರ್ಶಿಯನ್ನಾಗಿ ಹಾಗೂ ಇಸ್ರೊ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಹಾಲಿ ಕಾರ್ಯದರ್ಶಿ ಎ.ಎಸ್.ಕಿರಣ್ ಕುಮಾರ್ ಅವರ ಸೇವಾವಧಿ ಜನವರಿ 14ರಂದು ಕೊನೆಗೊಳ್ಳಲಿದ್ದು ಇವರ ಸ್ಥಾನಕ್ಕೆ ಶಿವನ್ ನಿಯುಕ್ತಿಗೊಳ್ಳಲಿದ್ದಾರೆ. ಶಿವನ್ ಸೇವಾವಧಿ ಮೂರು ವರ್ಷಗಳು ಎಂದು ಸರಕಾರದ ಮೂಲಗಳು ತಿಳಿಸಿವೆ.
ವಿಕ್ರಮ್ ಸಾರಾಭಾಯ್, ಸತೀಶ್ ಧವನ್‌ರಂತಹ ಪ್ರಸಿದ್ಧರು ಇಲಾಖೆಗೆ ಅತ್ಯುನ್ನತ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದಾರೆ. ಇವರು ಹಾಕಿಕೊಟ್ಟ ಪಥದಲ್ಲಿ ಮುಂದೆ ಸಾಗಲು ನನಗೆ ದೊರೆತಿರುವ ಈ ಅವಕಾಶ ಬಹುದೊಡ್ಡ ಗೌರವವಾಗಿದೆ ಎಂದು ಶಿವನ್ ತಿಳಿಸಿದ್ದಾರೆ.
ಸಂಪುಟದ ನೇಮಕಾತಿ ಸಮಿತಿಯ ಅಂಗೀಕಾರದ ಬಳಿಕ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ ನೇಮಕಾತಿ ಆದೇಶ ಜಾರಿಗೊಳಿಸಿದೆ. ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವಿಮಾನಶಾಸ್ತ್ರ ಇಂಜಿನಿಯರಿಂಗ್ ಪದವೀಧರನಾಗಿರುವ ಶಿವನ್, ಬೆಂಗಳೂರಿ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂಇ ಪದವಿ, ಐಐಟಿ ಬಾಂಬೆಯಿಂದ ಡಾಕ್ಟರೇಟ್ ಪದವಿ ಪಡೆದವರು. 1982ರಲ್ಲಿ ಇಸ್ರೋಗೆ ಸೇರಿದ್ದ ಶಿವನ್, ಜೂನ್ 2015ರಲ್ಲಿ ವಿಕ್ರಮ್ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡಿದ್ದರು.