ಆಕಸ್ಮಿಕ ಬೆಂಕಿ: ಗುಡಿಸಲು,ದವಸಧಾನ್ಯ ಬೆಂಕಿಗಾಹುತಿ

ಮಂಡ್ಯ, ಜ.10: ಆಕಸ್ಮಿಕ ಬೆಂಕಿಬಿದ್ದು 11 ಗುಡಿಸಲುಗಳು ಭಸ್ಮವಾಗಿ, ಆರು ಕುರಿಗಳು ಸಜೀವ ದಹನ ಹಾಗು ಅಪಾರ ಪ್ರಮಾಣದ ವಸ್ತುಗಳು ನಾಶವಾಗಿರುವ ಘಟನೆ ತಾಲೂಕಿನ ಕೀಲಾರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ತಮಿಳುನಾಡು ಮೂಲದ ಗ್ರಾಮದಲ್ಲಿ 40 ವರ್ಷದಿಂದ ಕೂಲಿನಾಲಿ ಮಾಡಿಕೊಂಡಿದ್ದ ಅಯ್ಯಕುಟ್ಟಿ, ಸಡೆಯಾ, ಆನಂದ್, ರಾಮಲಿಂಗು, ಧರ್ಮಲಿಂಗು, ಅಣ್ಣಾಮಲೈ, ರಾಮೈ, ದೊರೆ, ವೇಲು, ಮುರುಘ, ಮೂರ್ತಿ ಅವರ ಗುಡಿಸಲುಗಳು ಭಸ್ಮವಾಗಿದ್ದು, ಕುಟುಂಬಗಳು ಬೀದಿಗೆ ಬಿದ್ದಿವೆ. ಎಲ್ಲರೂ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರು ಕುರಿಗಳು ಸಜೀವ ದಹನವಾಗಿವೆ ಮತ್ತು ಸುಮಾರು 25 ಕ್ವಿಂಟಾಲ್ ಭತ್ತ, ಇತರ ಪಧಾರ್ಥಗಳು ಸಂಪೂರ್ಣ ಬೆಂದುಹೋಗಿವೆ. ಗುಡಿಸಲೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕಪಕ್ಕದ ಗುಡಿಸಲುಗಳಿಗೆ ಹಬ್ಬಿದೆ. ಗ್ರಾಮಸ್ಥರು ಬೆಂಕಿ ನಂದಿಸುವ ಯತ್ನ ನಡಿಸಿದರೂ ಗುಡಿಸಲುಗಳು ಸಂಪೂರ್ಣ ಭಸ್ಮವಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯಾಧಿಕಾರಿ ಡಾ.ನಂಜುಂಡಯ್ಯ ಇಲಾಖೆಯಿಂದ ದೊರೆಯುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಎಸ್ಪಿ ಜಿ.ರಾಧಿಕಾ, ಎಸಿ ರಾಜೇಶ್, ತಹಸೀಲ್ದಾರ್ ನಾಗೇಶ್, ಪಿಎಸ್‍ಐ ಅಜರುದ್ದೀನ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಾಗಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.





