ಕನ್ನಡ ಭಾಷೆ ಮತ್ತು ಜನಾಂಗದ ಜತೆ ಭಾವನಾತ್ಮಕ ಸಂಬಂಧವಿದೆ: ಪ್ರೊ.ಕೆ.ಆರ್.ದುರ್ಗಾದಾಸ್

ಮಂಡ್ಯ, ಜ.10: ಕನ್ನಡ ಭಾಷೆ ಮತ್ತು ಜನಾಂಗದ ಜತೆ ಭಾವನಾತ್ಮಕ ಸಂಬಂಧವಿದೆ ಎಂದು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್ ದುರ್ಗಾದಾಸ್ ಅಭಿಪ್ರಾಯಪಟ್ಟರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಮಾನಸ ಗಂಗೋತ್ರಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಪಿಇಎಸ್ ಪದವಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಹಮ್ಮಿಕೊಂಡಿರುವ ಶಾಸ್ತ್ರೀಯ ಕನ್ನಡ ಪಠ್ಯಗಳ ಅಧ್ಯಯನ ಕಮ್ಮಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವಂತಿಕೆ ಹೊಂದಿರುವ ಕನ್ನಡ ಭಾಷೆ ಇಂದು ಎರಡನೇ ದರ್ಜೆಯ ಭಾಷೆಯಾಗುತ್ತಿದೆ. ಪೋಷಕರಿಗೆ ಕಾನ್ವೆಂಟುಗಳು ನೀಡುವ ಶಿಕ್ಷಣ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ. ಇಂಗ್ಲಿಷ್ ಕಲಿಯಬೇಕು ಎನ್ನುವ ಹೊರಗಿನ ಒತ್ತಡದಲ್ಲಿದ್ದೇವೆ ಎಂದು ಅವರು ವಿಷಾದಿಸಿದರು.
ಭಾಷೆ ಇಲ್ಲದಿದ್ದರೆ ವ್ಯಾಕರಣ, ಸಾಹಿತ್ಯ, ವಿಮರ್ಶೆ, ಮೀಮಾಂಸೆ ಮುಂತಾದ ಶಾಖೆಗಳು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಜಾಗತೀಕರಣ, ಶಿಕ್ಷಣದ ವ್ಯಾಪಾರೀಕರಣಗಳ ಕಾರಣದಿಂದ ಇಂದು ಇಂಗ್ಲಿಷ್ ತಲೆಯ ಮೇಲೆ ಬಂದು ಕುಳಿತಿದೆ. ಕನ್ನಡ ನಡುವಿಗಿಂತ ಕೆಳಗಿಳಿಯುತ್ತಿದೆ. ಇಂತಹ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಕನ್ನಡವನ್ನು ಎತ್ತಿ ನಿಲ್ಲಿಸುವ, ಬೆಳೆಸುವ ರಚನಾತ್ಮಕ ಕಾರ್ಯವನ್ನು ಸಾಹಿತ್ಯ ಪರಿಷತ್ತಿನಂತ ಸಂಸ್ಥೆಗಳು ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.
ಸಮಾರಂಭವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಅಸೋಸಿಯೇಟ್ ಫೆಲೋ ಡಾ.ಮಾಲಿನಿ.ಎನ್.ಅಭ್ಯಂಕರ್, ಪ್ರಾಂಶುಪಾಲ ಅನಿಲ್‍ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಹೊಳಲು ಶ್ರೀಧರ್, ಇತರರಿದ್ದರು.







