ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ
ಹೊಸದಿಲ್ಲಿ, ಜ.10: ಪ್ರತಿಷ್ಠಿತ ಸ್ವರ್ಣಾಭರಣಗಳ ಮಳಿಗೆಯಾದ ಜೋಯಲುಕ್ಕಾಸ್‌ನ ದೇಶದಾದ್ಯಂತದ 130 ಮಳಿಗೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಕರ್ನಾಟಕ, ಕೇರಳ, ಪುಣೆ ಮತ್ತು ಕೋಲ್ಕತಾ ಸೇರಿದಂತೆ ದೇಶದ 130 ಮಳಿಗೆಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಮಾರಾಟದ ಲೆಕ್ಕವನ್ನು ಮರೆಮಾಚಿದ್ದು ಹಾಗೂ ಭಾರೀ ಪ್ರಮಾಣದಲ್ಲಿ ನಗದು ಜಮೆ ಮಾಡಿರುವ ಕಾರಣಕ್ಕೆ ದಾಳಿ ನಡೆದಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಜೋಯಲುಕ್ಕಾಸ್ ಮಳಿಗೆಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. 2016ರ ಎಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಜೋಯಲುಕ್ಕಾಸ್ ಮಳಿಗೆಗಳು 5.7 ಟನ್‌ಗಳಷ್ಟು , ಅಂದರೆ 1,500 ಕೋಟಿ ರೂ. ಮೊತ್ತದ ಸ್ವರ್ಣಾಭರಣಗಳನ್ನು ಮಾರಾಟ ಮಾಡಿರುವುದಾಗಿ ಲೆಕ್ಕ ಪತ್ರದಲ್ಲಿ ನಮೂದಿಸಲ್ಪಟ್ಟಿತ್ತು. ಆದರೆ ಈ ಮಾರಾಟ ಮೊತ್ತದ ಮೇಲೆ ಕಡ್ಡಾಯವಾಗಿ ಪಾವತಿಸಬೇಕಿದ್ದ ಶೇ.1ರಷ್ಟು ಕೇಂದ್ರ ಅಬಕಾರಿ ತೆರಿಗೆ ಪಾವತಿಸಲು ಸಂಸ್ಥೆ ವಿಫಲವಾಗಿತ್ತು ಎಂಬ ಕಾರಣಕ್ಕೆ , 16 ಕೋಟಿ ರೂ. ಕೇಂದ್ರ ಅಬಕಾರಿ ತೆರಿಗೆ ಪಾವತಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿತ್ತು.







