ಶಿವಮೊಗ್ಗ; ಧನ್ಯಶ್ರೀ ಸಾವಿಗೆ ಕಾರಣಕರ್ತರಾದವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯ

ಶಿವಮೊಗ್ಗ, ಜ. 10: ಸಂಘ ಪರಿವಾರ ಸಂಘಟನೆಗಳ ನೈತಿಕ ಪೊಲೀಸ್‍ಗಿರಿ ಖಂಡಿಸಿ, ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಕಾರಣಕರ್ತರಾದವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬುಧವಾರ ನಗರದ ಮಹಾತ್ಮ ಗಾಂಧಿ ಉದ್ಯಾನವನದ ಗಾಂಧೀಜಿ ಪ್ರತಿಮೆಯ ಮುಂಭಾಗ ಎನ್‍ಎಸ್‍ಯುಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಚಿಕ್ಕಮಗಳೂರಿ ಜಿಲ್ಲೆಯ ಮೂಡಿಗೆರೆಯಲ್ಲಿ ಸಂಘ ಪರಿವಾರ ಸಂಘಟನೆಗಳ ನೈತಿಕ ಪೊಲೀಸ್‍ಗಿರಿಗೆ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಸಂಘ ಪರಿವಾರದ ಪುಂಡಾಟಿಕೆಗೆ ನಿದರ್ಶನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧನ್ಯಶ್ರೀ ತನಗೆ ಇಷ್ಟಬಂದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುವ ಹಕ್ಕು ಹೊಂದಿದ್ದರೂ, ಅನ್ಯ ಕೋಮಿನ ವ್ಯಕ್ತಿಯನ್ನು ಮಾತನಾಡಿಸಿದ ಏಕೈಕ ಕಾರಣಕ್ಕೆ ಧರ್ಮದ ಹೆಸರಿನಲ್ಲಿ ಆಕೆಗೆ ಮಾನಸಿಕ ಹಿಂಸೆ ನೀಡಲಾಗಿದೆ. ಆಕೆಯ ಮನೆಗೆ ತೆರಳಿ ಬೆದರಿಸುವ ಕೆಲಸ ನಡೆಸಲಾಗಿದೆ. ಇದರಿಂದ ಬೆದರಿದ ಯುವತಿಯು ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ರಾಜ್ಯದ ವಿವಿಧೆಡೆ ಸಂಘ ಪರಿವಾರದ ಸಂಘಟನೆಗಳು ಪದೇ ಪದೇ ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸುವ ಮೂಲಕ, ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿವೆ. ಈ ರೀತಿಯ ಸಮಾಜಬಾಹಿರ ಕೃತ್ಯಗಳಿಂದ ಮಹಿಳೆಯರು, ಯುವತಿಯರು ಆತಂತಕಿತರಾಗಿದ್ದಾರೆ. ಮುಕ್ತವಾಗಿ ಓಡಾಡಲು ಭಯಪಡುವಂತೆ ಮಾಡಿದೆ.
ತಕ್ಷಣವೇ ರಾಜ್ಯ ಸರ್ಕಾರ ನೈತಿಕ ಪೊಲೀಸ್‍ಗಿರಿ ನಡೆಸುವ ಸಂಘಟನೆಗಳನ್ನು ನಿಷೇಧಿಸಬೇಕು. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿದ್ಯಾರ್ಥಿನಿ ಧನ್ಯಶ್ರೀ ಪ್ರಕರಣವನ್ನು ಉನ್ನತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯವತಿಯಿಂದ ಬೀದಿಗಿಳಿದು ಉಗ್ರ ಸ್ವರೂಪದ ಪ್ರತಿಭಟನೆ ನಡೆಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಕೆ. ಚೇತನ್, ಎಚ್.ಎಸ್.ಬಾಲಾಜಿ, ವಿಕಾಸ್ ನಾಡಿಗ್, ಎಸ್.ಪ್ರಮೋದ್, ವಿಜಯ್, ಧನಂಜಯ್, ಶ್ರವಣ, ಅನಿಲ್ ಆಚಾರ್ ಸೇರಿದಂತೆ ಮೊದಲಾದವರಿದ್ದರು.







