ಮದ್ದೂರು: ಅಕ್ರಮ ಜೂಜು ಅಡ್ಡೆ ತೆರವಿಗೆ ಆಗ್ರಹಿಸಿ ರಸ್ತೆತಡೆ

ಮದ್ದೂರು, ಜ.10: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಪರವಾನಗಿ ತೆಗೆದುಕೊಳ್ಳದೇ ಜೂಜು ಅಡ್ಡೆಯನ್ನು ನಡೆಸುತ್ತಿರುವ ಕ್ರಮ ಖಂಡಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು, ಗ್ರಾಮಸ್ಥರು ಮದ್ದೂರು ತುಮಕೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತ್ ವತಿಯಿಂದ ಪರವಾನಗಿ ನೀಡದಿದ್ದರೂ ಜೂಜು ಅಡ್ಡೆ ನಡೆಸಲು ಅವಕಾಶ ನೀಡಿರುವ ಪೊಲೀಸ್ ಆಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಗೋವಿಂದೇಗೌಡ ಮಾತನಾಡಿ, ಗ್ರಾಮದ ಪ್ರಮುಖ ಸ್ಥಳದಲ್ಲಿ ಜೂಜು ಅಡ್ಡೆ ತೆರೆಯಲಾಗಿದೆ. ಪ್ರತಿನಿತ್ಯ ನೂರಾರು ಯುವಕರು ಇಲ್ಲಿಗೆ ಬಂದು ಜೂಜಾಟದಲ್ಲಿ ಪಾಲ್ಗೊಂಡು ಗ್ರಾಮದ ಶಾಂತಿಗೆ ಭಂಗ ತಂದಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಮಂಚೇಗೌಡ ಅವರನ್ನು ಘೇರಾವ್ ಮಾಡಿದ ಗ್ರಾಮಸ್ಥರು, ಕೂಡಲೇ ಅಕ್ರಮ ಜೂಜು ಅಡ್ಡೆ ಬಂದ್ ಮಾಡುವಂತೆ ತಾಕೀತು ಮಾಡಿದರು.
ಕೂಡಲೇ ಅಕ್ರಮ ಜೂಜು ಅಡ್ಡೆಯನ್ನು ಬಂದ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.





