ಪಡೀಲ್: ಪೊಲೀಸ್ ಭದ್ರತೆಯಲ್ಲಿ ಮರಗಳ ಕಟಾವ್; ಪರಿಸರ ಪ್ರೇಮಿಗಳ ಅಸಮಾಧಾನ
ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳ

ಮಂಗಳೂರು, ಜ.10: ಕಳೆದ ಮೂರು ವರ್ಷದಿಂದ ವಾದ-ವಿವಾದಗಳ ಸುಲಿಗೆ ಸಿಲುಕಿದ್ದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣ ನಿರ್ಮಾಣಕ್ಕೆ ಪಡೀಲ್‌ನಲ್ಲಿ ಮೀಸಲಿರಿಸಿದ್ದ ನಿವೇಶನದ ಮರಗಳನ್ನು ಕಡಿಯುವ ಕೆಲಸವನ್ನು ಬುಧವಾರ ಆರಂಭಿಸಲಾಗಿದೆ.
ಮರಗಳನ್ನು ಕಡಿಯಲೇ ಬಾರದು ಎಂಬ ಪರಿಸರ ಪ್ರೇಮಿಗಳ ಬಲವಾದ ಆಗ್ರಹ ಮತ್ತು ವಿರೋಧದ ನಡುವೆ 100ಕ್ಕೂ ಅಧಿಕ ಕೆಎಸ್ಸಾರ್ಪಿ ಪೊಲೀಸ್ ಬಿಗಿ ಭದ್ರತೆಯ ಮಧ್ಯೆ ಮರಗಳನ್ನು ಕಡಿಯಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಗಳನ್ನು ಕಡಿಯಲು ಮಂಗಳವಾರ ಆದೇಶ ಹೊರಡಿಸಿದ್ದರು. ಅದರಂತೆ ಬುಧವಾರ ಬೆಳಗ್ಗಿನಿಂದಲೇ ಮರಗಳನ್ನು ಕಡಿಯುವ ಪ್ರಕ್ರಿಯೆ ಆರಂಭಗೊಂಡಿದೆ. ಅರಣ್ಯ ಇಲಾಖೆಗೆ ಸೇರಿದ ಸುಮಾರು 500ಕ್ಕೂ ಮರಗಳನ್ನು ಕಡಿಯಲು ಗುರುತು ಮಾಡಲಾಗಿದೆ. ಅದರಲ್ಲಿ ಪ್ರಸ್ತುತ 202 ಮರಗಳನ್ನು ಕಡಿಯಲು ಗುರುತಿಸಲಾಗಿತ್ತು. ಅಂದರೆ ಕಚೇರಿ ಕಟ್ಟಡ ನಿರ್ಮಾಣ ಸ್ಥಳ ಮತ್ತು ಅದರ ಮೂರು ಮೀ. ವ್ಯಾಪ್ತಿಯ ಸೆಟ್‌ಬ್ಯಾಕ್‌ನ ಮರಗಳನ್ನು ಕಡಿಯಲಾಗುತ್ತಿದೆ. ಅದರಲ್ಲಿ ತೆಂಗು, ಗಾಳಿ, ಗೊಬ್ಬರದ ಗಿಡ, ಬಿದಿರು ಮರಗಳು ಸೇರಿವೆ. ಸುಮಾರು 3 ಎಕರೆ ಜಾಗದಲ್ಲಿರುವ ಮರಗಳನ್ನು ಕಡಿಯಲು ಆರಂಭಿಸಲಾಗಿದೆ. ಕಡಿದ ಮರಗಳನ್ನು ಅರಣ್ಯ ಇಲಾಖೆಗೆ ಸೇರಿದ ಹೊಗೆಬಜಾರ್‌ನ ಡಿಪ್ಪೋಗೆ ಸಾಗಿಸಲಾಗುತ್ತದೆ.
ಮಂಗಳೂರು ತಾಲೂಕಿನ ಅಳಪೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ 5.89 ಎಕರೆ ಪ್ರದೇಶದಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ದ.ಕ. ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ ಯೋಜನೆಗೆ 2015ರಲ್ಲಿ ಮಂಜೂರಾತಿ ಸಿಕ್ಕಿತ್ತು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಈ ಜಾಗ ಹಸಿರು ತಾಣವಾಗಿದ್ದು, ಡೀಮ್ಡ್ ಅರಣ್ಯವಾಗಿದೆ. ಅಲ್ಲಿ ಮರಗಳನ್ನು ಕಡಿಯಬಾರದು. ಯೋಜನೆ ಕೈಬಿಡಬೇಕು ಎಂದು ವಾದಿಸಿ ಪರಿಸರವಾದಿಗಳು ಹೈಕೋರ್ಟ್‌ಗೆ ಮೊರೆಹೋಗಿದ್ದರು. ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಮೆಟ್ಟಿಲೇರಿದ್ದರು. ಈ ಹಿನ್ನ್ನೆಲೆಯಲ್ಲಿ ನ್ಯಾಯಾಧೀಕರಣ ಯೋಜನೆ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತ್ತು. ಬಳಿಕ ಎನ್‌ಜಿಟಿ ಕಳೆದ ಡಿ.20ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ನಿಗದಿಪಡಿಸಲಾಗಿರುವ ಪ್ರದೇಶದಲ್ಲಿರುವ ಮರಗಳನ್ನು ಕಡಿಯುವುದಕ್ಕೆ ಸಂಬಂಧಪಟ್ಟಂತೆ ನಿಯಮಗಳ ಪ್ರಕಾರ ಅರಣ್ಯ ಇಲಾಖೆ ಪೂರಕ ಕ್ರಮಗಳಂತೆ ಸಾರ್ವಜನಿಕ ಆಕ್ಷೇಪಣೆಗಳನ್ನು ಜ.4ರಂದು ಮಂಗಳೂರು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಹವಾಲು ಸಭೆ ಆಯೋಜಿಸಲಾಗಿತ್ತು. ಅಲ್ಲಿ ಪರ-ವಿರೋಧ ಚರ್ಚೆಯಾದರೂ ಕೂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಗಳನ್ನು ಕಡಿಯಲು ಆದೇಶಿಸಿದಂತೆ ಬುಧವಾರ ಮರಗಳನ್ನು ಕಡಿಯಲಾಗುತ್ತಿದೆ.
ಮಂಗಳೂರಿನಲ್ಲಿ ಹಸುರಿನ ಹೊದಿಕೆ ಕಡಿಮೆಯಾಗಿದ್ದು, ತಾಪ ಹೆಚ್ಚಾಗಿ ಅಂತರ್ಜಲ ಮಟ್ಟ ಕುಸಿಯುತ್ತಾ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಮರ ಗಿಡಗಳನ್ನು ಉಳಿಸುವುದು ಅನಿವಾರ್ಯ. ನೂತನ ಜಿಲ್ಲಾದಿಕಾರಿ ಕಚೇರಿಗೆ 666 ಮರಗಳನ್ನು ಕಡಿಯುವುದು ಸರಿಯಲ್ಲ. ಅರಣ್ಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದರೂ ಅದನ್ನು ಪರಿಗಣಿಸದೆ ಮರಗಳನ್ನು ಕಡಿಯುವುದು ಖಂಡನೀಯ ಎಂದು ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ತಿಳಿಸಿದ್ದಾರೆ.







