6ನೆ ಪರಿಷ್ಕೃತ ವೇತನ-ನಿವೃತ್ತಿ ಸೇವಾ ಸೌಲಭ್ಯಕ್ಕೆ ಒತ್ತಾಯ
ಬೆಂಗಳೂರು, ಜ.10: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿವೃತ್ತ ನೌಕರರಿಗೆ ಜ.14, 2012ರಿಂದ ಮಾ.31, 2014ರವರೆಗಿನ 6ನೆ ಪರಿಷ್ಕೃತ ವೇತನ ಹಾಗೂ ಹೆಚ್ಚುವರಿ ನಿವೃತ್ತಿ ಸೇವಾ ಸೌಲಭ್ಯವನ್ನು ಪಾವತಿಸಬೇಕೆಂದು ನಿಗಮದ ನಿವೃತ್ತ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ 6ನೆ ಪರಿಷ್ಕೃತ ವೇತನ ಶ್ರೇಣಿಯನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ನೌಕರರಿಗೆ ನೀಡಲು ಒಪ್ಪಿರುತ್ತದೆ. ಆದರೆ, ನಿಗಮದ ಆಡಳಿತ ಮಂಡಳಿಯ ಸಭೆಯಲ್ಲಿ ನಿಗಮದ ನೌಕರರಿಗೆ ಎ.1, 2012ರಿಂದ ಅನ್ವಯಿಸುವ ಬದಲು ಎ.1, 2014ರಿಂದ ಪರಿಷ್ಕೃತ ವೇತನ ಶ್ರೇಣಿ ನಿಗದಿ ಪಡಿಸಿದೆ. ಹೀಗಾಗಿ ಪ್ರಾರಂಭದಲ್ಲಿ ಮೀನುಗಾರಿಕಾ ನಿಗಮವನ್ನು ಕಟ್ಟಿ ಬೆಳೆಸಿದ ಹಿರಿಯ ನೌಕರರಿಗೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರಕಾರ ಆದೇಶದಂತೆ ರಾಜ್ಯದ ಎಲ್ಲ ನಿಗಮಗಳ ನೌಕರರಿಗೂ ಎ.1, 2012ರಿಂದಲೇ 6ನೆ ಪರಿಷ್ಕೃತ ವೇತನ ಜಾರಿಯಾಗಿದ್ದರೂ ಮೀನುಗಾರಿಕಾ ಅಭಿವೃದ್ಧಿ ನಿಗಮದ ಹಿರಿಯ ನೌಕರರಿಗೆ ಮಾತ್ರ ಈ ಭಾಗ್ಯ ಸಿಕ್ಕಿಲ್ಲ. ಸರಕಾರಕ್ಕೆ ಮೀನುಗಾರಿಕಾ ನಿಗಮ ಸಲ್ಲಿಸಬೇಕಾಗಿದ್ದ ಬಾಕಿ ಸಾಲ 75ಲಕ್ಷ ರೂ.ವನ್ನು ಒಂದೇ ಕಂತಿನಲ್ಲಿ ಪಾವತಿಸಲಾಗಿದೆ. ಪ್ರಸ್ತುತ ನಿಗಮವು ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಆದರೆ, ನಿಗಮವನ್ನು ಈ ಹಂತಕ್ಕೆ ತಂದಿರುವ ನಿವೃತ್ತ ನೌಕರರನ್ನು ಮಾತ್ರ ಕಡೆಗಣಿಸಲಾಗುತ್ತಿದೆ ಎಂದು ನಿಗಮದ ನಿವೃತ್ತ ನೌಕರ ಧನಂಜಯ ಪುತ್ರನ್ ಬೆಂಗರೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರ ನೇಮಿಸಿದ ಸತ್ಯ ಶೋಧನಾ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮೀನುಗಾರಿಕಾ ನೌಕರರಿಗೆ ಎ.1, 2012ರಿಂದಲೇ ಅನ್ವಯವಾಗುವಂತೆ 6ನೆ ಪರಿಷ್ಕೃತ ವೇತನವನ್ನು ಪಾವತಿಸುವಂತೆ ಮೀನುಗಾರಿಕಾ ಇಲಾಖೆ ವರದಿ ನೀಡಿದೆ. ಹೀಗಾಗಿ ಎ.1, 2012ರಿಂದ ಮಾ.31, 2014ರೊಳಗಡೆ ನಿವೃತ್ತಿ ಹೊಂದಿರುವ ಹಿರಿಯ ನೌಕರರ ಸೇವಾ ಅವಧಿಯ ಹೆಚ್ಚುವರಿ ಗ್ರಾಚುಟಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವಂತೆ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.







