ವಿಶ್ವದ ಮೂರನೇ ಅತಿದಟ್ಟಣೆಯ ವಾಯುಮಾರ್ಗ ಯಾವುದು ಗೊತ್ತೇ?

ಮುಂಬೈ, ಜ.11: ಭಾರತದ ರಾಜಕೀಯ ರಾಜಧಾನಿ ಹೊಸದಿಲ್ಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈ ನಡುವೆ ದಿನಕ್ಕೆ 130 ವಿಮಾನಗಳು ಸಂಚರಿಸುತ್ತಿದ್ದು, ವಿಶ್ವದಲ್ಲೇ ಮೂರನೇ ಅತಿದಟ್ಟಣೆಯ ಆಂತರಿಕ ವಾಯುಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಎರಡು ವಿಮಾನ ನಿಲ್ದಾಣಗಳ ನಡುವೆ 2017ರಲ್ಲಿ ಒಟ್ಟು 47,462 ವಿಮಾನಗಳು ಓಡಾಡಿದ್ದು, ದಕ್ಷಿಣ ಕೊರಿಯಾದ ಸಿಯೋಲ್ ಗಿಂಪೂ ಮತ್ತು ಜೆಜು ಮಾರ್ಗ (64,991) ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್- ಸಿಡ್ನಿ (54,519) ವಾಯುಮಾರ್ಗಗಳನ್ನು ಹೊರತುಪಡಿಸಿದರೆ, ಇದು ಅತ್ಯಂತ ದಟ್ಟಣೆಯ ಮಾರ್ಗ ಎನಿಸಿಕಕೊಂಡಿದೆ. ಬ್ರಿಟನ್ನ ಓಎಜಿ ಏವಿಯೇಶನ್ ವರ್ಲ್ಡ್ವೈಡ್ ಈ ವರದಿ ಬಿಡುಗಡೆ ಮಾಡಿದೆ.
ಎರಡು ದೇಶೀಯ ವಿಮಾನ ನಿಲ್ದಾಣಗಳ ನಡುವೆ ಕಾರ್ಯಾಚರಣೆ ನಡೆಸುವ ವಿಮಾನಗಳ ಸಂಖ್ಯೆಯನ್ನು ಆಧರಿಸಿ, ರ್ಯಾಂಕಿಂಗ್ ನೀಡಲಾಗುತ್ತದೆ. ನ್ಯೂಯಾರ್ಕ್ ಮತ್ತು ಲಂಡನ್ನಂಥ ಮೆಗಾಸಿಟಿಗಳನ್ನು ಹೊರತುಪಡಿಸಿ, ಮುಂಬೈ ಮತ್ತು ದಿಲ್ಲಿಯಲ್ಲಿ ಕೇವಲ ತಲಾ ಒಂದೊಂದು ಪ್ರಮುಖ ವಿಮಾನ ನಿಲ್ದಾಣಗಳಿವೆ. ಆದ್ದರಿಂದ ಎಲ್ಲ ಪ್ರಮುಖ ವಾಯುಮಾರ್ಗಗಳು ಈ ಎರಡು ನಿಲ್ದಾಣಗಳ ನಡುವೆ ಕಾರ್ಯಾಚರಣೆ ನಡೆಸುತ್ತವೆ.
ಬೆಂಗಳೂರು- ದಿಲ್ಲಿ ವಿಶ್ವದಲ್ಲಿ 11ನೇ ದಟ್ಟಣೆಯ ವಿಮಾನ ಮಾರ್ಗವಾಗಿದ್ದು, 29,427 ವಿಮಾನಗಳು 2017ರಲ್ಲಿ ಕಾರ್ಯಾಚರಿಸಿವೆ. ಬೆಂಗಳೂರು- ಮುಂಬೈ ಮಾರ್ಗ 16ನೇ ಸ್ಥಾನದಲ್ಲಿದ್ದು, 23,857 ವಿಮಾನಗಳು ಓಡಾಡುತ್ತಿವೆ.