ಇಂದು ಮಲ್ಹೋತ್ರ, ಕೆ.ಎಂ. ಜೋಸೆಫ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ: ಕೊಲೀಜಿಯಂ ಶಿಫಾರಸು

ಹೊಸದಿಲ್ಲಿ, ಜ. 11: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯನ್ನಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರ ನೇರ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಇಂದು ಮಲ್ಹೋತ್ರ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇರ ನೇಮಕಕ್ಕೆ ಶಿಫಾರಸುಗೊಂಡ ಮೊದಲ ಮಹಿಳೆ. ಇವರೊಂದಿಗೆ, ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.
2007ರಲ್ಲಿ ಹಿರಿಯ ವಕೀಲೆಯಾಗಿ ನಿಯುಕ್ತಿಗೊಂಡ ಇಂದು ಮಲ್ಹೋತ್ರ ಉಚ್ಚ ನ್ಯಾಯಾಲಯಕ್ಕೆ ಭಡ್ತಿ ಹೊಂದುವ ಮೊದಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇರ ನೇಮಕಗೊಳ್ಳಲಿರುವ ಮೊದಲ ಮಹಿಳಾ ವಕೀಲೆ.
ಸ್ವಾತಂತ್ರ್ಯಾ ನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯ ಹುದ್ದೆಗೆ ನೇಮಕಗೊಳ್ಳುತ್ತಿರುವ 7ನೇ ಮಹಿಳೆ ಇಂದು ಮಲ್ಹೋತ್ರ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ಏಕೈಕ ನ್ಯಾಯಮೂರ್ತಿ ಆರ್. ಭಾನುಮತಿ.
ಸರ್ವೋಚ್ಚ ನ್ಯಾಯಾಲಯದ ಮೊದಲ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದ ಮಹಿಳೆ ಎಂ. ಫಾತಿಮಾ ಬೀವಿ. ಅವರು 1989ರಲ್ಲಿ ನೇಮಕರಾಗಿದ್ದರು.
ಅನಂತರ ನ್ಯಾಯಮೂರ್ತಿಗಳಾದ ಸುಜಾತಾ ವಿ. ಮನೋಹರ್, ರುಮಾ ಪಾಲ್, ಜ್ಞಾನ ಸುಧಾ ಮಿಶ್ರಾ ಹಾಗೂ ರಂಜನ ಪ್ರಕಾಶ್ ದೇಸಾಯಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.