ಮಾದಕ ವಸ್ತು ಮಾರಾಟ: ನಾಲ್ವರ ಬಂಧನ

ಬೆಂಗಳೂರು, ಜ.11: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನೈಜೀರಿಯಾ ಪ್ರಜೆಗಳಿಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ನೌಸು(32), ಜೆ.ಪಿ.ನಗರದ ಜಾನ್ ಮೈಸನ್ ಸಿಮೋನ್(26), ಒರಿಸ್ಸಾ ಮೂಲದ ಉಮೇಶ್‌ಕುಮಾರ್ ಗಹನ್(25) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಕೋರಮಂಗಲದ 5ನೆ ಕ್ರಾಸ್, 4ನೆ ಬ್ಲಾಕ್‌ನಲ್ಲಿರುವ ಸ್ವಾಭಿಮಾನಿ ಕಾರಂಜಿ ಪಾರ್ಕ್ ಬಳಿ ಗಾಂಜಾ ಮಾರಾಟ ಯತ್ನದ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ, ಕಾರ್ಯಾಚರಣೆ ನಡೆಸಿ ಬಂಧಿಸಿ ಇವರಿಂದ 8 ಕೆಜಿ ಗಾಂಜಾ, 120 ಗ್ರಾಂ ತೂಕದ ಹಶೀಶ್, 874ಗ್ರಾಂ ಎಲ್‌ಎಸ್‌ಡಿ ಪೇಪರ್, ನಾಲ್ಕು ಮೊಬೈಲ್, 3,700 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಸಂಬಂಧ ನೈಜೀರಿಯಾ ಮೂಲದ ನೊಬೆಲ್(33) ಎಂಬಾತನನ್ನು ಬಂಧಿಸಿದ್ದಾರೆ. ಹೊರಮಾವು ಆಗರದ ಹೋಣಿ ರಸ್ತೆಯಲ್ಲಿನ ಬಿಬಿಎಂಪಿ ಕಚೇರಿ ಎದುರಿನ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಸಿಸಿಬಿ ಹೇಳಿದೆ.
ಈತ ವೀಸಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಮಾದಕ ವಸ್ತು ವಶದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮ ಲಾಭ ಗಳಿಸುತ್ತಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ 18 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್, ಬೈಕ್, 2 ಲ್ಯಾಪ್‌ಟಾಪ್, 4 ಸಾವಿರ ರೂ. ನಗದು ವಶಪಡಿಸಿಕೊಂಡು ಇಲ್ಲಿನ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







