ನಕಲಿ ಪಿಸ್ತೂಲು ತೋರಿಸಿ ಸುಲಿಗೆ: ವ್ಯಕ್ತಿಯ ಬಂಧನ

ಬೆಂಗಳೂರು, ಜ.11: ನಕಲಿ ಪಿಸ್ತೂಲ್ ತೋರಿಸಿ ವೃದ್ಧೆಯಿಂದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಪಟ್ಟಣದ ನಾಗೇಶ್‌ಮೂರ್ತಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.30ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ವಿಜಯನಗರದ ವಜ್ರಮುನಿ ನಗರದ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ ವೃದ್ಧೆಗೆ ನಕಲಿ ಪಿಸ್ತೂಲ್ ತೋರಿಸಿ ಕೈಗಳಿಂದ ಹಲ್ಲೆ ಮಾಡಿ ಬೀರುನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಬೆಲೆ ಬಾಳುವ ವಾಚುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದನು ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ 470 ಗ್ರಾಂ ತೂಕದ ಚಿನ್ನಾಭರಣ, 3 ವಾಚು, ಕೃತ್ಯಕ್ಕೆ ಬಳಸಿದ್ದ ನಕಲಿ ಪಿಸ್ತೂಲನ್ನು ವಶಕ್ಕೆ ಪಡೆದಿದ್ದು, ಇವುಗಳ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Next Story





