ಮುಲ್ಲಪೆರಿಯಾರ್ ಅಣೆಕಟ್ಟು: ವಿಕೋಪ ನಿರ್ವಹಣಾ ಸಮಿತಿ ರಚಿಸಿ
ಕೇಂದ್ರ, ತಮಿಳುನಾಡು, ಕೇರಳ ಸರಕಾರಕ್ಕೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ, ಜ. 11: 180 ವರ್ಷ ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟಿನ ನಿವೇಶನದಲ್ಲಿ ಅನಿರೀಕ್ಷಿತವಾಗಿ ಸಂಭವಿಸಬಹುದಾದ ಯಾವುದೇ ವಿಕೋಪವನ್ನು ಪ್ರತ್ಯೇಕವಾಗಿ ನಿರ್ವಹಿಸಲು ಮೂರು ಸಮಿತಿ ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯ ಗುರುವಾರ ಕೇಂದ್ರ, ತಮಿಳುನಾಡು, ಕೇರಳ ಸರಕಾರಕ್ಕೆ ನಿರ್ದೇಶಿಸಿದೆ.
ಆದಾಗ್ಯೂ, ಪ್ರಸ್ತಾಪಿತ ಸಮಿತಿ ಕೇರಳದಲ್ಲಿರುವ ಅಣೆಕಟ್ಟಿನ ವಿಕೋಪದ ಆಯಾಮಗಳನ್ನು ಮಾತ್ರ ನಿರ್ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಹೇಳಿದೆ.
ಐವರು ಸದಸ್ಯರ ಸಾಂವಿಧಾನಿಕ ಪೀಠದ 2014ರ ತೀರ್ಪು ಅನುಸರಿಸಿ ರೂಪಿಸಲಾದ ಈಗಿರುವ ಸಮಿತಿ ಚಾರಿತ್ರಿಕ ಅಣೆಕಟ್ಟಿನ ಬಾಳ್ವಿಕೆ, ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಕೂಡ ಪೀಠ ಸ್ಪಷ್ಟಪಡಿಸಿದೆ.
ಅಣೆಕಟ್ಟಿನ ಬಾಳ್ವಿಕೆ ಹಾಗೂ ಸುರಕ್ಷತೆ ವಿಷಯಗಳ ಬಗ್ಗೆ ಅಂತಾರಾಷ್ಟ್ರೀಯ ತಜ್ಞರಿಂದ ಅಧ್ಯಯನ ನಡೆಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕೇರಳ ಮೂಲದ ರಸ್ಸೆಲ್ ಜೋಯ್ ಸಲ್ಲಿಸಿದ ಮನವಿ ವಿಚಾರಣೆ ನಡೆಸಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.