ಕಮಲಾ ಮಿಲ್ಸ್ ಅಗ್ನಿ ದುರಂತ: ರೆಸ್ಟೋರೆಂಟ್‌ನ ಮೂವರು ಮಾಲಕರ ಬಂಧನ

ಮುಂಬೈ, ಜ.11: ಕಮಲಾ ಮಿಲ್ಸ್ ಕಂಪೌಂಡ್‌ನಲ್ಲಿ ನಡೆದ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ವನ್ ಎಬೌ ರೆಸ್ಟೋರೆಂಟ್‌ನ ತಲೆಮರೆಸಿಕೊಂಡಿದ್ದ ಮಾಲಕರಾದ ಕೃಪೇಶ್ ಸಾಂಘ್ವಿ ಮತ್ತು ಅವರ ಸಹೋದರ ಜಿಗರ್‌ನನ್ನು ಉಪನಗರಿ ಬಾಂಡ್ರಾದಲ್ಲಿ ಬುಧವಾರ ಬಂಧಿಸಿದ್ದಾರೆ. ರೆಸ್ಟೋರೆಂಟ್‌ನ ಪಾಲುದಾರರಾದ ಅಭಿಜಿತ್ ಮಂಕರ್‌ನನ್ನು ಕೂಡಾ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರದಂದು ದೃಢಪಡಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಡಿಸೆಂಬರ್ 29ರಂದು 14 ಜನರನ್ನು ಬಲಿಪಡೆದುಕೊಂಡ ಅಗ್ನಿದುರಂತ ಪ್ರಕರಣದಲ್ಲಿ ಪೊಲಿಸರು ವನ್ ಎಬೌ ರೆಸ್ಟೋರೆಂಟ್‌ನ ಮಾಲಕರ ವಿರುದ್ಧ ದೋಷಪೂರಿತ ಹತ್ಯೆ ಪ್ರಕರಣವನ್ನು ದಾಖಲಿಸಿದ್ದರು. ಈ ಘಟನೆಯ ನಂತರ ಆರೋಪಿಗಳಾದ ಸಾಂಘ್ವಿ ಸಹೋದರರು ಮತ್ತು ಅಭಿಜಿತ್ ಮಂಕರ್ ತಲೆಮರೆಸಿಕೊಂಡಿದ್ದರು. ಅಗ್ನಿದುರಂತದಲ್ಲಿ ವನ್ ಎಬೌ ಮತ್ತು ಮೊಜೊ ಬ್ಟಿಸ್ಟೊ ರೆಸ್ಟೋರೆಂಟ್ ಸಂಪೂರ್ಣವಾಗಿ ಭಸ್ಮವಾಗಿದ್ದವು.
ಪೊಲೀಸರು ಆರಂಭದಲ್ಲಿ ಸಾಂಘ್ವಿ ಸಹೋದರರ ಆಪ್ತ ಸ್ನೇಹಿತ ವಿಶಾಲ್ ಕಾರಿಯ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಆತನ ವಿಚಾರಣೆಯ ವೇಳೆ ಸಾಂಘ್ವಿ ಸಹೋದರರು ಅಡಗಿರುವ ಸ್ಥಳದ ಮಾಹಿತಿಯನ್ನು ಆತ ಪೊಲೀಸರಿಗೆ ನೀಡಿದ್ದ. ಆರೋಪಿಗಳು ವಕೀಲರೊರ್ವರನ್ನು ಭೇಟಿಯಾಗಲು ಬಾಂಡ್ರಾದ ಹೊಟೇಲೊಂದಕ್ಕೆ ಆಗಮಿಸುತ್ತಿರುವುದಾಗಿ ಅವರಿಗೆ ಆಶ್ರಯ ನೀಡಿದ್ದ ಕಾರಿಯ ಪೊಲೀಸರಿಗೆ ತಿಳಿಸಿದ್ದ. ಕೂಡಲೇ ಪೊಲೀಸರು ತಂಡವನ್ನು ರಚಿಸಿ ಬಾಂಡಾಕ್ಕೆ ತೆರಳಿ ಆರೋಪಿಗಳು ಬರುವ ಸಮಯ ಕಾದು ಅವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಪ್ರಕರಣದಲ್ಲಿ ಪೊಲೀಸರ ಪ್ರತ್ಯೇಕ ಏಳು ತಂಡಗಳನ್ನು ರಚಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಸದ್ಯ ಪೊಲೀಸರು ಮೊಜೊ ಬ್ರಿಸ್ಟೊ ರೆಸ್ಟೋರೆಂಟ್‌ನ ಮಾಲಕ ಯುಗ್ ಟುಲಿಯ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಟುಲಿಯನ್ನು ಮಂಗಳವಾರದಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನೋಡಲಾಗಿತ್ತಾದರೂ ಅವರಿಗೆ ವಿಮಾನದಲ್ಲಿ ತೆರಳಲು ಸಾಧ್ಯವಾಗಿರಲಿಲ್ಲ. ನಂತರ ಅವರು ಆ ಸ್ಥಳದಿಂದ ನಾಪತ್ತೆಯಾಗಿದ್ದರು. ಕಳೆದ ವಾರ ನಿವೃತ್ತ ಪೊಲೀಸ್ ಪ್ರಧಾನ ನಿರ್ದೇಶಕರು ಮತ್ತು ಪುಣೆಯ ನಿವೃತ್ತ ಪೊಲೀಸ್ ಆಯುಕ್ತರ ಮಗ ಹಾಗೂ ಮೊಜೊ ಬ್ರಿಸ್ಟೊದಾ ಪಾಲುದಾರರಾದ ಯುಗ್ ಪಾಠಕ್ ಅವರನ್ನು ಪೊಲೀಸರು ಬಂಧಿಸಿದ್ದರು.