ಚುನಾವಣಾ ಆಯೋಗಕ್ಕೆ ಲಂಚ ಪ್ರಕರಣ: ಸುಖೇಶ್ ಚಂದ್ರಶೇಖರ್ ಜಾಮೀನು ಅರ್ಜಿ ತಿರಸ್ಕೃತ

ಹೊಸದಿಲ್ಲಿ, ಜ. 11: ಎಐಎಡಿಎಂಕೆ ನಾಯಕ ಟಿ.ಟಿ.ವಿ. ದಿನಕರನ್ ಹಾಗೂ ಇತರರು ಭಾಗಿಯಾಗಿದ್ದಾರೆ ಎಂದು ಹೇಳಲಾದ ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಕಳೆದ ವರ್ಷ ಎಪ್ರಿಲ್ 16ರಂದು ಬಂಧಿತನಾಗಿರುವ ಚಂದ್ರಶೇಖರ್ ಅವರ ಜಾಮೀನು ಕೋರಿದ ಅರ್ಜಿಯನ್ನು ನ್ಯಾಯಮೂರ್ತಿ ಮುಕ್ತಾ ಗುಪ್ತಾ ತಿರಸ್ಕರಿಸಿದ್ದಾರೆ. ಈ ಹಿಂದೆ ಚಂದ್ರಶೇಖರ್ ಅವರ ಮನವಿಯನ್ನು ವಿಚಾರಣಾ ನ್ಯಾಯಾಲಯ ಮೂರು ಬಾರಿ ತಿರಸ್ಕರಿಸಿದೆ.
ಕಸ್ಟಡಿಯಲ್ಲಿರುವಾಗ ಅವರ ನಡತೆ ಸರಿಯಾಗಿಲ್ಲ. ಅವರು ಕಾನೂನಿಗೆ ಗೌರವ ನೀಡುತ್ತಿಲ್ಲ. ಆದುದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ದಿಲ್ಲಿ ಪೊಲೀಸರು ಹೇಳಿದ್ದರು.
ಕಸ್ಟಡಿಯಲ್ಲಿ ಇರುವಾಗ ಅವರ ವಿರುದ್ಧ ಮತ್ತೆ 3 ಪ್ರಕರಣಗಳು ದಾಖಲಾಗಿವೆ. ಈಗ ಒಟ್ಟು 24 ಪ್ರಥಮ ಮಾಹಿತಿ ವರದಿಗಳು ಅವರ ವಿರುದ್ಧ ದಾಖಲಾಗಿದೆ ಎಂದು ಹೆಚ್ಚುವರಿ ಸರಕಾರಿ ವಕೀಲ ಹಿರೇನ್ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದರು.
Next Story