ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ವೃದ್ಧ ದಂಪತಿ ಪತ್ರ

ಮುಂಬೈ,ಜ.11: ಮುಂಬೈನ ವೃದ್ಧ ದಂಪತಿ ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ತಮಗೆ ಮಕ್ಕಳಿಲ್ಲ ಮತ್ತು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೂ ತಮಗಿಲ್ಲ. ಆದರೆ ತಮ್ಮಿಂದ ಸಮಾಜಕ್ಕೆ ಈಗೇನೂ ಉಪಯೋಗವಿಲ್ಲ ಮತ್ತು ಸಮಾಜಕ್ಕೆ ಯಾವುದೇ ಕೊಡುಗೆ ನೀಡಲೂ ತಮಗೆ ಸಾಧ್ಯವಿಲ್ಲ ಎಂದು ನಾರಾಯಣ ಲಾವತೆ(86) ಅವರು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಮರಣ ದಂಡನೆಗೊಳಗಾದವರಿಗೆ ಕ್ಷಮೆಯನ್ನು ನೀಡುವ ಸಾಂವಿಧಾನಿಕ ಅಧಿಕಾರವಿದೆ. ಅದೇ ರೀತಿ ‘ಸಾಯುವ ಹಕ್ಕು’ ನೀಡಲೂ ಅವರಿಗೆ ಅಧಿಕಾರವಿರಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲಾವತೆ ಪ್ರತಿಪಾದಿಸಿದರು.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿಯಾಗಿದ್ದ ಲಾವತೆ(86) 1989ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಜೀವನದ ಈ ಘಟ್ಟದಲ್ಲಿ ನಾವು ಬದುಕಲು ಬಯಸುತ್ತಿಲ್ಲ, ಅಷ್ಟೇ. ನಮ್ಮ ಜೀವನದಲ್ಲಿ ಯಾವುದೇ ಕಷ್ಟವಿಲ್ಲ, ಆದರೂ ಬದುಕಲು ನಾವು ಬಯಸುವುದಿಲ್ಲ ಎಂದು ಮುಂಬೈನ ಪ್ರೌಢಶಾಲೆಯೊಂದರ ಪ್ರಾಂಶುಪಾಲೆಯಾಗಿ ನಿವೃತ್ತರಾಗಿರುವ ಪತ್ನಿ ಇರಾವತಿ ಲಾವತೆ(79) ಹೇಳಿದರು.
ಮಕ್ಕಳು ಬೇಡವೆಂದು ತಮ್ಮ ದಾಂಪತ್ಯ ಜೀವನದ ಆರಂಭದಲ್ಲಿಯೇ ತಾವು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೆವು ಎಂದು ತಿಳಿಸಿದ ಲಾವತೆ ದಂಪತಿ, ತಾವೇನಾದರೂ ಕಾಯಿಲೆ ಬಿದ್ದರೆ ಯಾರಾದರೂ ತಮ್ಮ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ತಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.