ವಿಮಾನ ನಿಲ್ದಾಣ ರನ್ವೇಯಲ್ಲಿ ಲಗೇಜ್ ಟ್ರಕ್ ವರದಿ: ನಿರ್ದೇಶಕರ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ಮಂಗಳೂರು, ಜ. 11: ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ಮಾಡುವಾಗ ರನ್ವೇಯಲ್ಲಿ ಲಗೇಜ್ ಟ್ರಕ್ ಕಾಣಿಸಿಕೊಂಡಿತ್ತೆಂಬುದನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ನಿರಾಕರಿಸಿದ್ದಾರೆ.
‘‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳೂರು-ಮುಂಬೈ ಜೆಟ್ ಏರ್ವೇಸ್ ವಿಮಾನ ಟೇಕಾಫ್ ಆಗುತ್ತಿದ್ದಂತೆ ರನ್ವೇಯಲ್ಲಿ ಲಗೇಜ್ ಟ್ರಕ್ವೊಂದು ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ ತಕ್ಷಣ ಸೂಚನೆ ನೀಡಿದ್ದರಿಂದ ವಿಮಾನ ಟೇಕಾಫ್ನ್ನು ತಡೆಯಲಾಯಿತು’’ ಎಂಬ ಸುದ್ದಿಯೊಂದು ಮಾಧ್ಯಮ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಪ್ರಾಧಿಕಾರದ ನಿರ್ದೇಶಕರಲ್ಲಿ ಕೇಳಿದಾಗ ಅವರು ಇಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಹುಲ್ಲು ಕತ್ತರಿಸುವ ಮಿಶಿನ್ನನ್ನು ಟ್ರಾಕ್ಟರ್ ಮೂಲಕ ರನ್ವೇಯ ಸನಿಹಕ್ಕೆ ಒಯ್ಯಲಾಗಿತ್ತು. ಆದರೆ ಅದು ರನ್ವೇಯಲ್ಲಿರಲಿಲ್ಲ. ಸಿಬ್ಬಂದಿ ತನ್ನ ಕಾರ್ಯದಲ್ಲಿ ನಿರತರಾಗಿದ್ದರು. ಈ ಮೆಶಿನ್ನನ್ನು ತೆರವುಗೊಳಿಸುವವರೆಗೆ ವಿಮಾನವನ್ನು ಟೇಕಾಫ್ ಮಾಡಲು ಕೆಲವು ನಿಮಿಷಗಳ ಕಾಲ ತಡೆ ಹಿಡಿಯಲಾಗಿತ್ತು. ಮೆಶಿನ್ ಹೊತ್ತ ಟ್ರಾಕ್ಟರ್ನ್ನು ತೆರವುಗೊಳಿಸಿದ ಬಳಿಕವೇ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಸುರಕ್ಷತಾ ಕ್ರಮವಾಗಿ ವಿಮಾನವನ್ನು ತಡೆ ಹಿಡಿಯಲಾಗಿತ್ತೇ ಹೊರತು ಯಾವುದೇ ಲಗೇಜ್ ಟ್ರಕ್ ಅಥವಾ ಲಗೇಜ್ ಟ್ರಾಕ್ಟರ್ನಿಂದ ರನ್ವೇಯಲ್ಲಿ ಕಾಣಿಸಿಕೊಂಡಿದ್ದರಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







