ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಆರ್.ಅಶೋಕ್ ವಿರುದ್ದ ಅಕ್ರಮ ಭೂ ಮಂಜೂರಾತಿ ಆರೋಪ

ಬೆಂಗಳೂರು, ಜ.11: ಅಕ್ರಮ ಭೂ ಮಂಜುರಾತಿ ಆರೋಪದಲ್ಲಿ ಭಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಬಿಜೆಪಿ ಮುಖಂಡ ಆರ್.ಅಶೋಕ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೊರ್ಟ್ ಸರದಿ ಪ್ರಕಾರವೆ ಅರ್ಜಿ ವಿಚಾರಣೆಗೆ ಬರಲಿ ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.
ಬಿಜೆಪಿ ಮುಖಂಡ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ನಂಜುಂಡರೆಡ್ಡಿ ಅವರು, ಎಫ್‌ಐಆರ್ ರದ್ದುಕೋರಿ ಬಿಜೆಪಿ ಮುಖಂಡ ಆರ್.ಅಶೋಕ್ ಸಲ್ಲಿಸಿರುವ ಅರ್ಜಿಯನ್ನು ಇಂದೇ ವಿಚಾರಣೆಗೆ ತೆಗೆದುಕೊಳ್ಳಿ ಎಂದು ಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು ಸರದಿ ಪ್ರಕಾರವೆ ಅರ್ಜಿ ವಿಚಾರಣೆಗೆ ಬರಲಿ ಎಂದು ತಿಳಿಸಿ ಅರ್ಜಿ ವಿಚಾಣೆಯನ್ನು ಜ.18ಕ್ಕೆ ಮುಂದೂಡಿತು.
ಪ್ರಕರಣವೇನು: ಬಿಜೆಪಿ ಮುಖಂಡ ಆರ್.ಅಶೋಕ್ ಅವರು 1998 ರಿಂದ 2006ರವರೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆಂದು ಎಸಿಬಿಯಲ್ಲಿ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಸಿ), 13(1)(ಡಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ಹಾಗೂ ಕಲಂ 420, 120(ಬಿ) ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 1998 ರಿಂದ 2006ರಲ್ಲಿನ ಈ ಪ್ರಕರಣವದ ರದ್ದು ಕೋರಿ ಅಶೋಕ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 1998 ರಿಂದ 2006ರಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಆಗಿದ್ದ ರಾಮಚಂದ್ರಯ್ಯ, ಕಂದಾಯ ನಿರೀಕ್ಷಕ ಗವಿಗೌಡ, ನೆಲಗುಳಿ ವೃತ್ತದ ಕಂದಾಯ ನಿರೀಕ್ಷಕ ಚೌಡರೆಡ್ಡಿ, ಗ್ರಾಮಲೆಕ್ಕಿಗ ಶಶಿಧರ್ ಅವರನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.







