ಅಫ್ಜಲ್ ಗುರು ಪುತ್ರನಿಗೆ 12ನೆ ತರಗತಿ ಪರೀಕ್ಷೆಯಲ್ಲಿ 88 ಶೇ.ಅಂಕ

ಶ್ರೀನಗರ, ಜ.11: ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಝಲ್ ಗುರುವಿನ ಪುತ್ರ ಗಾಲಿಬ್ ಗುರು 12ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. ಗುರುವಾರದಂದು ಘೋಷಣೆಯಾದ ಪರೀಕ್ಷಾ ಫಲಿತಾಂಶದಲ್ಲಿ ಗಾಲಿಬ್ ಗುರು ಶೇಕಡಾ 88 ಅಂಕಗಳನ್ನು ಪಡೆದಿರುವುದಾಗಿ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಫ್ಝಲ್ ಗುರುವನ್ನು 2013ರಲ್ಲಿ ಮರಣ ದಂಡನೆಗೆ ಗುರಿ ಮಾಡಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಶಾಲಾ ಶಿಕ್ಷಣ ಮಂಡಳಿಯ ಪ್ರಕಾರ ಕಳೆದ ನವೆಂಬರ್‌ನಲ್ಲಿ ನಡೆದ ಪರೀಕ್ಷೆಗೆ ಹಾಜರಾದ 55,163 ವಿದ್ಯಾರ್ಥಿಗಳ ಪೈಕಿ ಶೇ. 61.44ರಂತೆ 33,893 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇ.64.31ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ ಹುಡುಗರ ಪ್ರಮಾಣ ಶೇ.58.92 ಆಗಿದೆ.
17ರ ಹರೆಯದ ಗಾಲಿಬ್ ಗುರುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಸಂದೇಶಗಳು ಬರುತ್ತಿದ್ದು, ಸ್ನೇಹಿತರು ಮತ್ತು ಕುಟುಂಬಸ್ಥರು ಬಾರಾಮುಲ್ಲಾ ಜಿಲ್ಲೆಯ ಸೊಪೊರ್‌ನಲ್ಲಿರುವ ಆತನ ಮನೆಗೆ ತೆರಳಿ ಶುಭಾಶಯ ತಿಳಿಸುತ್ತಿರುವುದಾಗಿ ಮಾಧ್ಯಮಗಳು ತಿಳಿಸಿವೆ. ಗಾಲಿಬ್ 10ನೇ ತರಗತಿಯಲ್ಲಿ ಎಲ್ಲ ಐದು ವಿಷಯಗಳಲ್ಲೂ ಎ1 ಗ್ರೇಡ್ ಪಡೆಯುವುದರೊಂದಿಗೆ ಶೇ. 95 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಎಂದು ವರದಿ ತಿಳಿಸಿದೆ.
“12ನೇ ತರಗತಿಯಲ್ಲಿ 441 ಅಂಕಗಳೊಂದಿಗೆ ಉತ್ತೀರ್ಣನಾಗಿರುವ ಗಾಲಿಬ್ ಗುರುವಿಗೆ ಶುಭಾಶಯಗಳು. ಸಾಗುವ ದಾರಿ ಕಠಿಣವಾಗಿದ್ದಾಗ ದೃಢ ನಿರ್ಧಾರ ಹೊಂದಿರುವವ ಮಾತ್ರ ಯಶಸ್ವಿಯಾಗುತ್ತಾನೆ ಎಂಬುದನ್ನು ಗಾಲಿಬ್ ತೋರಿಸಿಕೊಟ್ಟಿದ್ದಾನೆ. ನಿನ್ನ ಭವಿಷ್ಯವು ಉಜ್ವಲವಾಗಿರಲಿ” ಎಂದು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರೆ ಸಾರಾ ಹಯಾತ್ ಟ್ವೀಟ್ ಮಾಡಿದ್ದಾರೆ.