ಸೀರೆಯ ಮೇಲೆ ಕೋಟ್ ಧರಿಸುವಂತೆ ಶಿಕ್ಷಕಿಯರಿಗೆ ಒತ್ತಾಯ ಮಾಡುವಂತಿಲ್ಲ: ಆಯೋಗ

ತಿರುವನಂತಪುರಂ, ಜ.11: ಶಿಕ್ಷಕಿಯರು ಸೀರೆಯ ಮೇಲೆ ಕೋಟ್ ಧರಿಸಬೇಕು ಎಂಬ ಅನುದಾನಿತ ಶಾಲೆಯೊಂದರ ಸೂಚನೆಯ ವಿರುದ್ಧ ಆದೇಶ ನೀಡಿದ ಕೇರಳ ಮಹಿಳಾ ಆಯೋಗ ಸೀರೆಯ ಮೇಲೆ ಕೋಟ್ ಧರಿಸುವಂತೆ ಶಿಕ್ಷಕಿಯರನ್ನು ಒತ್ತಾಯ ಮಾಡುವಂತಿಲ್ಲ ಎಂದು ತಿಳಿಸಿದೆ.
ಪತ್ತನಂತಿಟ್ಟದಲ್ಲಿರುವ ಸಂತ ಮೇರಿ ಪ್ರೌಢ ಶಾಲೆಯು ಈ ಸೂಚನೆಯನ್ನು ನೀಡಿದ್ದು, ಇದು ಸರಕಾರಿ ಆದೇಶದ ವಿರುದ್ಧವಾಗಿದೆ ಎಂದು ಆಯೋಗದ ಸದಸ್ಯೆ ಶಹೀದ ಕಮಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಬೀನಾ ಎಂಬ ಶಿಕ್ಷಕಿ ಶಾಲೆಯ ಈ ಸೂಚನೆಯನ್ನು ನಿರಾಕರಿಸಿದ ಕಾರಣಕ್ಕೆ ಶಾಲಾ ಮಂಡಳಿ ಆಕೆಯಲ್ಲಿ ಸ್ಪಷ್ಟನೆಯನ್ನು ಕೋರಿತ್ತು. ಇದರಿಂದಾಗಿ ಆಕೆ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಕೋಟ್ ಧರಿಸಲು ನನಗೆ ಕೆಲವು ದೈಹಿಕ ಸಮಸ್ಯೆಗಳಿವೆ. ಅದಲ್ಲದೆ ಶಾಲೆಯ ಪುರುಷ ಸಿಬ್ಬಂದಿಗೆ ಅಥವಾ ಶಿಕ್ಷಕರಿಗೆ ಈ ಸೂಚನೆಯನ್ನು ನೀಡಲಾಗಿಲ್ಲ ಎಂದು ಬೀನಾ ತಮ್ಮ ದೂರಿನಲ್ಲಿ ತಿಳಿಸಿದ್ದರು. ಆದೇಶವನ್ನು ನೀಡುವುದಕ್ಕೂ ಮುನ್ನ ಶಹೀದ ಕಮಲ್ ಶಾಲೆಗೆ ಭೇಟಿ ನೀಡಿ ಸಾಕ್ಷಿಗಳನ್ನು ಕಲೆ ಹಾಕಿದ್ದರು.
Next Story