ಮೀಸಲಾತಿ ಬೇಡಿಕೆ: ಗ್ರಾಮಗಳಲ್ಲಿ ಮರಾಠಾ ಸಮೀಕ್ಷೆ ಆರಂಭಿಸಿದ ಮಹಾರಾಷ್ಟ್ರ ಸರಕಾರ
ಮುಂಬೈ,ಜ.11: ಮೀಸಲಾತಿಗೆ ತನ್ನ ಬೇಡಿಕೆಯ ಈಡೇರಿಕೆಗೆ ಮರಾಠಾ ಕ್ರಾಂತಿ ಮೋರ್ಚಾ ವಿಧಿಸಿರುವ ಗಡುವಿಗೆ ಮುನ್ನ ರಾಜ್ಯದಲ್ಲಿಯ 700ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಮರಾಠಾ ಸಮುದಾಯದ ಸದಸ್ಯರ ಸ್ಯಾಂಪಲ್ ಸರ್ವೆಯೊಂದನ್ನು ಮಹಾರಾಷ್ಟ್ರ ಸರಕಾರವು ಕೈಗೊಂಡಿದೆ.
ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕೆಂಬ ಸಮುದಾಯದ ಬೇಡಿಕೆಯು ಸಮರ್ಥನೀಯವೇ ಎನ್ನುವುದನ್ನು ಕಂಡುಕೊಳ್ಳಲು ಅದರ ಆರ್ಥಿಕ ಹಿಂದುಳಿಯುವಿಕೆಯ ಬಗ್ಗೆ ಮಾಹಿತಿಗಳನ್ನು ಪಡೆಯಲು ಸ್ಯಾಂಪಲ್ ಸರ್ವೆಯನ್ನು ನಡೆಸಲಾಗುತ್ತಿದೆ ಎಂದು ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನ್ಯಾ(ನಿವೃತ್ತ).ಎಂ.ಜಿ.ಗಾಯಕ್ವಾಡ್ ತಿಳಿಸಿದರು.
ಪ್ರಮುಖವಾದ ಮೀಸಲಾತಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಫೆ.10ರೊಳಗೆ ಈಡೇರಿಸುವಂತೆ ರಾಜ್ಯದಲ್ಲಿಯ ಮರಾಠಾ ಸಂಘಟನೆಗಳು ಕಳೆದ ತಿಂಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದವು. ಬೇಡಿಕೆಗಳು ಈಡೇರದಿದ್ದರೆ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವಾದ ಫೆ.19ರ ಬಳಿಕ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಲು ಈ ಸಂಘಟನೆಗಳು ಯೋಜಿಸಿವೆ.
ಸ್ಯಾಂಪಲ್ ಸರ್ವೆಗಾಗಿ ರಾಜ್ಯದ 356 ತಾಲೂಕುಗಳಿಂದ ತಲಾ ಎರಡು ಗ್ರಾಮಗಳು ಮತ್ತು ಕೆಲವು ನಗರಸಭೆ ವ್ಯಾಪ್ತಿ ಪ್ರದೇಶಗಳನ್ನು ಆಯ್ದುಕೊಳ್ಳಲಾಗಿದೆ ಎಂದು ಗಾಯಕ್ವಾಡ್ ತಿಳಿಸಿದರು.
ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಮರಾಠರು ರಾಜ್ಯದ ಜನಸಂಖ್ಯೆಯ ಸುಮಾರು ಶೇ.30ರಷ್ಟಿದ್ದಾರೆ.