ಚಿಣ್ಣರ ಮಾಸೋತ್ಸವದ ಸಮಾರೋಪ: ಮಾಳ ಶಾಲೆಗೆ ಪ್ರಥಮ ಬಹುಮಾನ

ಉಡುಪಿ, ಜ.11: ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಚಿಣ್ಣರ ಸಂತರ್ಪಣೆ ಶಾಲೆಗಳಿಗಾಗಿ ಸುಮಾರು ಒಂದು ತಿಂಗಳ ಕಾಲ ನಡೆದ ಚಿಣ್ಣರ ಮಾಸೋತ್ಸವದ ಸಮಾರೋಪ ಸಮಾರಂಭ ಇಂದು ಸಂಜೆ ನಡೆಯಿತು.
ಚಿಣ್ಣರ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾರ್ಕಳ ತಾಲೂಕಿನ ಮಾಳದ ಶ್ರೀಗುರುಕುಲ ಹಿರಿಯ ಪ್ರಾಥಮಿಕ ಶಾಲೆಗೆ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಪ್ರಶಸ್ತಿ ವಿತರಿಸಿ ಆಶೀರ್ವಚನ ನೀಡಿದರು.
ಪೇಜಾವರ ಕಿರಿಯ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀ ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ರಘುರಾಮ ಆಚಾರ್ಯರನ್ನು ಚಿಣ್ಣರ ಸಂತರ್ಪಣಾ ಶಾಲೆಗಳ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಒಕ್ಕೂಟದ ಅಧ್ಯಕ್ಷ ಅಶೋಕ್ ಮಾಡ, ಕಾರ್ಯದರ್ಶಿ ಶ್ರೀನಿವಾಸ್ ರಾವ್ ಮುಂತಾದವರು ಉಪಸ್ಥಿತರಿದ್ದರು.
ಮಧ್ವಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಣ್ಣರಸಂತರ್ಪಣಾ ಶಾಲೆಗಳ ಒಕ್ಕೂಟದ ವತಿಯಿಂದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದ ರನ್ನು ನಾಣ್ಯಗಳಿಂದ ತುಲಾಭಾರ ಮಾಡಲಾಯಿತು.





