ಬಟ್ಟೆಕುದ್ರು ಗ್ರಾಮಕ್ಕೆ ಶೀಘ್ರ ಕುಡಿಯುವ ನೀರು ಪೂರೈಕೆ: ಮಾಸಿಕ ಕೆಡಿಪಿಯಲ್ಲಿ ಭರವಸೆ

ಉಡುಪಿ, ಜ.11: ಹಕ್ಲಾಡಿ ಗ್ರಾಪಂ ವ್ಯಾಪ್ತಿಯ ಬಟ್ಟೆಕುದ್ರುವಿಗೆ ಫೆ.1ರಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಉಡುಪಿ ಜಿಪಂ ಸಭೆಗೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಅವರು ಮಾಹಿತಿ ನೀಡಿದರು.
ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಮಾಸಿಕ ಸಭೆಯಲ್ಲಿ ಈ ಮಾಹಿತಿ ನೀಡಿದ ಅಧಿಕಾರಿಗಳು, ಟೆಂಡರ್ ಅಂತಿಮ ಗೊಂಡಿದ್ದು ವಾಟರ್ ಪ್ಯೂರಿಫಿಕೇಷನ್ ಪ್ಲಾಂಟ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಎಂದರು. ಕಾಮಗಾರಿಯ ಪ್ರಗತಿಯನ್ನು ಜಿಪಂ ಸಿಇಓ ಅವರೇ ಖುದ್ದು ಪರಿಶೀಲನೆ ಮಾಡುತಿದ್ದಾರೆ ಎಂದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ ಬಾಬು ಶೆಟ್ಟಿ ಈ ಕಾಮಗಾರಿ ಬಗ್ಗೆ ಸಭೆಯ ಗಮನ ಸೆಳೆದಿದ್ದರು. ಹಕ್ಲಾಡಿಗೆ ಈಗಾಗಲೇ ಟ್ಯಾಂಕರ್‌ನಿಂದ ನೀರು ಪೂರೈಸುತ್ತಿದ್ದು, ಕಾಮಗಾರಿ ಸಂಪೂರ್ಣಗೊಂಡರೆ ಎಲ್ಲರಿಗೂ ಅನುಕೂಲ ವಾಗಲಿದೆ. ತಾನು ಖುದ್ದು ಸ್ಥಳ ಪರಿಶೀಲನೆ ನಡೆಸಿರುವುದಾಗಿ ಸಿಇಒ ಶಿವಾನಂದ ಕಾಪಶಿ ಹೇಳಿದರು. ಕುರ್ಕಾಲು, ಕುಕ್ಕುಂದೂರುಗಳಿಗೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಇದೇ ಸಂದರ್ಭ ಡಿಡಿಡಬ್ಲ್ಯುಎಸ್ (ಡಿಪಾರ್ಟ್‌ಮೆಂಟ್ ಆಪ್ ಡ್ರಿಂಕಿಂಗ್ ವಾಟರ್ ಅಂಡ್ ಸ್ಯಾನಿಟೇಷನ್) ಸಭೆಯ ಬಗ್ಗೆ ಸಮಿತಿ ಅಧ್ಯಕ್ಷನಾದ ತಮಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧ್ಯಕ್ಷ ದಿನಕರ ಬಾಬು ದೂರಿದರು.
ಯಡ್ತರೆ ಗ್ರಾಪಂನಲ್ಲಿ 2010ರಿಂದ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುಗಳ ವಿವರ ಹಾಗೂ ಖರ್ಚಿನ ವಿವರವನ್ನು ಬಾಬು ಶೆಟ್ಟಿ ಕೇಳಿದರಲ್ಲದೆ, ಗೋಳಿಹೊಳೆ ವ್ಯಾಪ್ತಿಯ ಕಾಮಗಾರಿ ಪಟ್ಟಿಯನ್ನು ಐಟಿಡಿಪಿ ಇಲಾಖೆ ಒದಗಿಸಬೇಕೆಂದು ಕೇಳಿದರು.
ಮೀನುಗಾರಿಕೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ನಿಗದಿತ ಗುರಿ ಸಾಧಿಸಿವೆ. ಕೃಷಿ ಇಲಾಖೆ ಪ್ರಸಕ್ತ ವರ್ಷದಲ್ಲಿ 3225 ಕ್ವಿಂಟಾಲ್ ರಾಸಾಯನಿಕ ಗೊಬ್ಬರ ವಿತರಿಸಿದ್ದು, ಭತ್ತ ಮತ್ತು ದ್ವಿದಳ ಧಾನ್ಯಗಳನ್ನೊಳಗೊಂಡಂತೆ 50,581 ಹೆಕ್ಟೆರ್‌ನಲ್ಲಿ 1,84,162 ಟನ್ ಆಹಾರಧಾನ್ಯ ಉತ್ಪಾದಿಸಿವೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಗ್ರಾಪಂಗಳು ಪರಿಷ್ಕೃತ ತೆರಿಗೆ ವಸೂಲಿ ಯಲ್ಲಿ ಇನ್ನಷ್ಟು ಪ್ರಗತಿ ದಾಖಲಿಸಬೇಕಿದೆ ಎಂದು ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಎಲ್ಲ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ಸೂಚನೆ ನೀಡಿದರು.
ಹಾವಂಜೆ ಶಾಲೆಯಲ್ಲಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ವಿದ್ಯಾಂಗ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹೇಳಿದರಲ್ಲದೆ, ಕೂರಾಡಿ- ಬಾರಕೂರು ರಸ್ತೆಗೆ ಫುಟ್‌ಪಾತ್ ಇಲ್ಲದಿರುವ ಬಗ್ಗೆಯೂ ಅಧಿಕಾರಿಗಳ ಗಮನ ಸೆಳೆದರು.
ಪಡುಬಿದ್ರೆ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ ಮಾಹಿತಿ ಪಡೆದರು. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.







