ಕ್ರೀಡಾಕೂಟಗಳಿಂದ ನೌಕರರಲ್ಲಿ ಒಗ್ಗಟ್ಟು: ಸಚಿವ ಪ್ರಮೋದ್

ಉಡುಪಿ, ಜ.11: ಪ್ರತಿದಿನ ಏಕತಾನತೆಯಿಂದ ಕೂಡಿದ ಕೆಲಸದಲ್ಲಿ ತೊಡಗುವ ಹಾಗೂ ಒತ್ತಡದಲ್ಲಿ ಕೆಲಸ ಮಾಡುವ ಸರಕಾರಿ ನೌಕರರು ಕ್ರೀಡಾಕೂಟದಲ್ಲಿ ಬಾಗವಹಿಸುವುದರಿಂದ ನೌಕರರಲ್ಲಿ ಭ್ರಾತೃತ್ವ ಭಾವನೆ ಮೂಡಿ, ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟು ಬೆಳೆದು ದೈನಂದಿನ ಒತ್ತಡ ನಿವಾರಣೆ ಯಾಗಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಗುರುವಾರ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತುತಿ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾಮಟ್ಟದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು ಶೇ.50ರಷ್ಟು ಸರಕಾರಿ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ 1978-79ರ ಜನಸಂಖ್ಯೆಗೆ ಅನುಗುಣವಾಗಿ ಸೃಷ್ಠಿಯಾಗಿದ್ದ ಹುದ್ದೆಗಳು ಮತ್ತೆ ಪರಿಷ್ಕರಣೆಯಾಗಿಲ್ಲ. ಆದರೂ ಸಹ ನೌಕರರು ಸರಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಮಾಡುತಿದ್ದಾರೆ, ಅದರಲ್ಲೂ ಉಡುಪಿ ಜಿಲ್ಲೆಯ ಸರಕಾರಿ ನೌಕರರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿಯೇ ಸರ್ವಶ್ರೇಷ್ಠರು ಎಂದು ಸಚಿವರು ಹೇಳಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸರಕಾರಿ ನೌಕರರಿಗೆ ಓಓಡಿ ನೀಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ಮಾಡುವ ಕುರಿತಂತೆ ಪರಿಶೀಲಿಸುವುದಾಗಿ ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ನೌಕರರಾದ ಉದಯಕುಮಾರ್ ಶೆಟ್ಟಿ, ಅರುಣ್ ಕುಮಾರ್, ಸುನಿತಾ, ಸ್ಮಿತಾ ಫೆರ್ನಾಂಡಿಸ್, ಮಾಲಿನಿ, ಆಶಾ, ರಂಜಿತ್‌ಕುಮಾರ್, ಕಾರ್ತಿಕೇಯ ಭಟ್, ಅಶ್ವಿನ್ ಸನಿಲ್, ಯಮುನಾ ಕುಮಾರಿ, ಗಣೇಶ್ ಶೆಟ್ಟಿ, ಮಂಜುನಾಥ್ ಐತಾಳ್, ಸುನೀಶ್‌ಬಾಬುಗೆ ಸಚಿವರು ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹೋಳಿಯಪ್ಪ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಕಾರ್ಕಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೈಕಲ್ ಜೋಕಿಂ ಪಿಂಟೋ, ಕುಂದಾಪುರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಮಾ ಲೋಕರೆ, ಕೋಶಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.
ರಾಮಕೃಷ್ಣ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.







