ಉಡುಪಿ: ಮಹಿಳಾ ಉದ್ಯಮಿಗಳ ‘ಪವರ್ ಪರ್ಬ’ಕ್ಕೆ ಚಾಲನೆ

ಉಡುಪಿ, ಜ.9: ಉಡುಪಿಯ ಪವರ್ ಪ್ಲಾಟ್‌ಫಾರಂ ಆಫ್ ವುಮೆನ್ ಎಂಟರ್‌ಪ್ರೆನರ್ಸ್ ರಿಜಿಸ್ಟರ್ಡ್(ಪವರ್) ವತಿಯಿಂದ ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಪವರ್ ಪರ್ಬ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ಉದ್ಘಾಟಿಸಿದರು.
ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಹಿಳೆಯರಿಗೆ ಈಗ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿವೆ. ಆದರೆ ಅಜ್ಞಾನ, ನಿರ್ಲಕ್ಷದಿಂದಾಗಿ ಅವುಗಳು ಮಹಿಳೆಯ ರಿಂದ ಕೈತಪ್ಪಿ ಹೋಗುತ್ತಿವೆ. ಇದೀಗ ಮಹಿಳೆಯರೇ ಸಂಘಟಿತರಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಳೆದ 13 ವರ್ಷಗಳಿಂದ ಪುತ್ತೂರು ಪರಿಸರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಸುಂದರಿ ಭಾರ್ಗವ್ ಅವರನ್ನು ಸನ್ಮಾನಿಸಲಾಯಿತು. ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ, ನಿಟ್ಟೆ ಮೆನೇಜ್‌ಮೆಂಟ್ ಇಸ್ಟಿಟ್ಯೂಟ್‌ನ ಡೀನ್ ಡಾ.ಅನಂತಪದ್ಮನಾಭ ಆಚಾರ್ ಮುಖ್ಯ ಅತಿಥಿಗಳಾಗಿದ್ದರು.
ಪವರ್ ಅಧ್ಯಕ್ಷೆ ಡಾ.ಗಾಯತ್ರಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪುಷ್ಪಾ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ.ಸ್ಮಿತಾ ರಂಜೀಶ್, ಕೋಶಾಧಿಕಾರಿ ಸುಗುಣ ಸುವರ್ಣ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಪವರ್ ಪರ್ಬದಲ್ಲಿ ಉಡುಪಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಗದಗ, ಮುಂಬಯಿ, ತಮಿಳುನಾಡು, ರಾಜಸ್ಥಾನಗಳ ಕರಕುಶಲ, ಆಭರಣ, ಗೃಹಾಲಂಕಾರ, ಸಿದ್ಧ ಉಡುಪು, ವಸ್ತ್ರ ವಿನ್ಯಾಸ, ಚಿತ್ರಕಲೆ ಸಹಿತ ಒಟ್ಟು 170 ಮಹಿಳೆಯರದ್ದೆ ಮಳಿಗೆಗಳಿವೆ.







