ಬೆಳ್ತಂಗಡಿ: ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ

ಬೆಳ್ತಂಗಡಿ, ಜ. 11: ಅತಿಯಾದ ಸುಖ-ಭೋಗದಿಂದ ಮನುಷ್ಯ ಸತ್ಯ, ಧರ್ಮ, ನ್ಯಾಯದಿಂದ ವಿಚಲಿತನಾಗಿ ಅಧರ್ಮ, ಅನ್ಯಾಯದ ಮಾರ್ಗವನ್ನು ಅನುಸರಿಸುತ್ತಾನೆ. ತ್ಯಾಗ ಜೀವನದಿಂದ ಭೋಗ ಜೀವನದ ಕಡೆಗೆ ಸಾಗುತ್ತಾನೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಮಾಲಕರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ನಡೆದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇವಲ ಹಣ ಕೊಡುವುದರಿಂದ ಪರಿವರ್ತನೆ ಆಗುವುದಿಲ್ಲ. ಹಣದ ಸದ್ವಿನಿಯೋಗದ ಬಗ್ಗೆ ಕಲಿಸಿದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ನಮ್ಮ ದೈನಂದಿನ ವ್ಯವಹಾರದಲ್ಲಿ ಆಧುನಿಕತೆ ಅಳವಡಿಸಿದಾಗ ಸುಂದರ ಭವಿಷ್ಯದ ಬಗ್ಯೆ ಉನ್ನತ ಸಾಧನೆ ಬಗ್ಯೆ ಕಲ್ಪನೆ ಹಾಗೂ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸರ್ಕಾರ ಮತ್ತು ಯೋಜನೆಯಿಂದ ಸಿಗುವ ಸವಲತ್ತು ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬನೆಯೊಂದಿಗೆ ಪ್ರಗತಿ ಸಾಧಿಸಲಾಗಿದೆ ಎಂದರು.
ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ ಶುಭ ಹಾರೈಸಿದರು.ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಎನ್. ಎಸ್. ಸೋಮಯಾಜಿ ಶುಭಾಶಂಸನೆ ಮಾಡಿ ಗ್ರಾಮಾಭಿವ್ರದ್ದಿ ಯೋಜನೆ ಮೂಲಕ ಆದ ಸಾಧನೆ-ಪ್ರಗತಿಯನ್ನು ಅಭಿನಂದಿಸಿದರು.
ಪ್ರಗತಿ ಬಂಧು ಒಕ್ಕೂಟದ ನಿರ್ಗಮನ ಅಧ್ಯಕ್ಷ ಮೋನಪ್ಪ ಗೌಡ ಮತ್ತು ನೂತನ ಅಧ್ಯಕ್ಷ ಪ್ರಭಾಕರ ಪೊಸಂದೋಡಿ ಒಕ್ಕೂಟದ ಪ್ರಗತಿಯಲ್ಲಿ ಸದಸ್ಯರ ಸಹಕಾರವನ್ನು ಶ್ಲಾಘಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ ಅಧುನಿಕ ತಂತ್ರಜ್ಞಾನದ ಮೂಲಕ ಯೋಜನೆಯ ಕೆಲಸವನ್ನು ಸುಲಭದಲ್ಲಿ, ಶೀಘ್ರವಾಗಿ ಮಾಡಲಾಗುತ್ತದೆ. ಫಲಾನುಭವಿಗಳ ಉಳಿತಾಯವನ್ನು ಭದ್ರತೆಯಾಗಿ ಪರಿಗಣಿಸಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ವರ್ಷಕ್ಕೆ 140 ಕೋಟಿ ರೂ. ಸಾಲ ನೀಡಲಾಗುತ್ತಿದೆ. ಸ್ವ-ಸಹಾಯ ಸಂಘಗಳು ಸ್ವಾಯತ್ತತೆ ಸಾಧಿಸಿವೆ ಎಂದು ಹೇಳಿದರು.ಸಿಂಡಿಕೇಟ್ ಬ್ಯಾಂಕ್ ಶೇ. 15ರ ಬಡ್ಡಿ ದರದಲ್ಲಿ ಸೇವಾ ಶುಲ್ಕ ರಹಿತವಾಗಿ ಸಾಲ ನೀಡಲು ಒಪ್ಪಿದೆ ಎಂದು ಅವರು ಪ್ರಕಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಗೌಡ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.







