ಆಕ್ರಮಿತ ಪ್ರದೇಶದಲ್ಲಿ 1,100 ಮನೆಗಳಿಗೆ ಇಸ್ರೇಲ್ ಅನುಮೋದನೆ

ಜೆರುಸಲೇಮ್, ಜ. 11: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗರು ನಿರ್ಮಿಸಿರುವ 1,100ಕ್ಕೂ ಅಧಿಕ ನೂತನ ಮನೆಗಳಿಗೆ ಇಸ್ರೇಲ್ ಅಧಿಕಾರಿಗಳು ಮಾನ್ಯತೆ ನೀಡಿದ್ದಾರೆ ಎಂದು ‘ಪೀಸ್ ನೌ’ ಎಂಬ ಸರಕಾರೇತರ ಸಂಘಟನೆ ಹೇಳಿದೆ.
ರಕ್ಷಣಾ ಸಚಿವಾಲಯದ ಸಮಿತಿಯೊಂದು ಬುಧವಾರ ಈ ಮಾನ್ಯತೆ ನೀಡಿದೆ.
ಸುಮಾರು 352 ಮನೆಗಳಿಗೆ ಅಂತಿಮ ಅನುಮೋದನೆ ಲಭಿಸಿದೆ ಹಾಗೂ ಉಳಿದ ಮನೆಗಳ ಅನುಮೋದನೆ ಪ್ರಕ್ರಿಯೆ ವಿವಿಧ ಹಂತಗಳಲ್ಲಿವೆ ಎಂದು ‘ಪೀಸ್ ನೌ’ ವಕ್ತಾರೆ ಹಗಿಟ್ ಒಫ್ರಾನ್ ತಿಳಿಸಿದರು.
ಪಶ್ಚಿಮ ದಂಡೆಯ ತೀರಾ ಒಳಗಿನ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಹೆಚ್ಚಿನ ಮನೆಗಳಿಗೆ ಅನುಮೋದನೆಗಳನ್ನು ನೀಡಲಾಗಿದೆ. ಆದರೆ, ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಎರಡು-ದೇಶ ಪರಿಹಾರದ ಪ್ರಕಾರ, ಈ ಮನೆಗಳನ್ನು ಇಸ್ರೇಲ್ ತೆರವುಗೊಳಿಸಬೇಕಾಗಿದೆ.
‘‘ಪಶ್ಚಿಮ ದಂಡೆಯ ಎಲ್ಲ ಭಾಗಗಳಲ್ಲಿ ಮನೆಗಳನ್ನು ನಿರ್ಮಿಸುವ ಹಾಗೂ ತೆರವುಗೊಳಿಸಬೇಕಾಗಿರುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸುವ ತಂತ್ರಗಾರಿಕೆಯ ಭಾಗವಾಗಿ ಈ ರೀತಿ ಮಾಡಲಾಗುತ್ತಿದೆ. ಈ ಮೂಲಕ ಎರಡು-ರಾಷ್ಟ್ರ ಪರಿಹಾರವನ್ನು ತಡೆಹಿಡಿಯುವುದು ಅವರ ಉದ್ದೇಶವಾಗಿದೆ’’ ಎಂದು ಒಫ್ರಾನ್ ಆರೋಪಿಸಿದರು.





