ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಪೌರತ್ವ ನೀಡಿದ ಇಕ್ವೆಡಾರ್

ಕ್ವಿಟೊ, ಜ.11: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಇಕ್ವೆಡಾರ್ ಪೌರತ್ವ ನೀಡಿದೆ. ಅಸಾಂಜ್ ಕಳೆದ ಐದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಲಂಡನ್‌ನಲ್ಲಿರುವ ಇಕ್ವೆಡಾರ್‌ನ ದೂತಾವಾಸದಲ್ಲಿ ಆಶ್ರಯ ಪಡೆದಿದ್ದರು. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಸ್ವೀಡನ್‌ಗೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಅಸಾಂಜ್ 2012ರಿಂದ ಇಕ್ವೆಡಾರ್ ದೂತಾವಾಸದಲ್ಲಿ ಆಶ್ರಯ ಪಡೆದಿದ್ದರು. ಸ್ವೀಡನ್ ಅಸಾಂಜ್ ವಿರುದ್ಧದ ಪ್ರಕರಣವನ್ನು ಕೈಬಿಟ್ಟರೂ, ಜಾಮೀನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಿಟನ್‌ನ ಪೊಲೀಸರು ಬಂಧಿಸುವ ಸಾಧ್ಯತೆ ಇದ್ದ ಕಾರಣ ಅಸಾಂಜ್ ದೂತಾವಾಸದಿಂದ ಹೊರಬರಲು ಇಚ್ಛಿಸಿರಲಿಲ್ಲ.
ಅಸಾಂಜ್‌ಗೆ ಪೌರತ್ವ ನೀಡಲು ನಿರ್ಧರಿಸಿರುವುದಾಗಿ ಇಕ್ವೆಡಾರ್‌ನ ವಿದೇಶ ವ್ಯವಹಾರ ಸಚಿವಾಲಯ ಗುರುವಾರ ಘೋಷಿಸಿದೆ. ಆದರೆ ಆಸ್ಟ್ರೇಲಿಯಾ ಮೂಲದ ಅಸಾಂಜ್‌ಗೆ ರಾಜತಾಂತ್ರಿಕ ಸ್ಥಾನಮಾನ ನೀಡಬೇಕೆಂಬ ಇಕ್ವೆಡಾರ್‌ನ ಕೋರಿಕೆಯನ್ನು ತಿರಸ್ಕರಿಸಿರುವುದಾಗಿ ಬ್ರಿಟನ್‌ನ ವಿದೇಶ ವ್ಯವಹಾರ ಇಲಾಖೆ ತಿಳಿಸಿದೆ.
Next Story





