ಸುಪ್ರೀಂ ಕೋರ್ಟ್ ನಲ್ಲಿ ಆಡಳಿತ ಸರಿಯಿಲ್ಲ: ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯ ಮೂರ್ತಿಗಳ ಹೇಳಿಕೆ
ದೇಶದಲ್ಲೇ ಮೊದಲ ಬಾರಿ ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ

ಹೊಸದಿಲ್ಲಿ, ಜ.12: ಸುಪ್ರೀಂ ಕೋರ್ಟ್ ನಲ್ಲಿ ಆಡಳಿತ ಸರಿಯಿಲ್ಲ. ನಾವು ಮುಖ್ಯ ನ್ಯಾಯ ಮೂರ್ತಿಗೆ ಪತ್ರ ಬರೆದು ಹೇಳುವ ಪ್ರಯತ್ನ ನಡೆಸಿದೆವು. ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾದ ಚೆಲಮೆಶ್ವರ್, ರಂಜನ್ ಗೋಗೊಯಿ, ಮದನ್ ಲೋಕುರ್ ಮತ್ತು ಕುರಿಯನ್ ಜೋಸೆಫ್ ಹೇಳಿದ್ದಾರೆ.
ನ್ಯಾ. ಬಿ ಎಚ್ ಲೋಯ ನಿಗೂಢ ಸಾವು ಅತ್ಯಂತ ಗಂಭೀರ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವೇ ನಿಮಿಷಗಳಲ್ಲಿ ಸುಪ್ರೀಂ ಕೋರ್ಟ್ ನ ಅತ್ಯಂತ ಹಿರಿಯ ನಾಲ್ಕು ನ್ಯಾಯಾಧೀಶರಿಂದ ಅಭೂತಪೂರ್ವ ಪತ್ರಿಕಾ ಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯ ನೇತೃತ್ವ ವನ್ನು ವಹಿಸಿದ್ದ ನ್ಯಾ. ಚೆಲಮೇಶ್ವರ್ ಮಾತನಾಡಿದರು.
ಮುಖ್ಯ ನ್ಯಾಯಾಧೀಶರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಾಲ್ವರು ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಆಡಳಿತದಲ್ಲಿ ಲೋಪವಿದೆ. ಆದರೆ ನಮ್ಮ ಮನವಿಗೆ ಮುಖ್ಯ ನ್ಯಾಯಾಧೀಶರು ಸ್ಪಂದಿಸಲಿಲ್ಲ ಎಂದು ನಾಲ್ವರು ನ್ಯಾಯಾಧೀಶರು ಹೇಳಿದರು.
ನಾವು ಬರೆದಿರುವ ಪತ್ರ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನಾವು ಇವತ್ತು ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿಯಾಗಿ ಆಡಳಿತದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದೆವು.
ಕೆಲವೊಮ್ಮೆ ಸುಪ್ರೀಂ ಕೋರ್ಟ್ ನ ಆಡಳಿತದಲ್ಲಿ ಬಯಸದ ಘಟನೆಗಳು ನಡೆಸುತ್ತಿದೆ. ಸಿಐಜೆಗೆ ಬರೆದಿರುವ ಪತ್ರದಲ್ಲಿ ಎಲ್ಲ ವಿಷಯಗಳನ್ನು ಉಲ್ಲೇಖಿಸಿ ದ್ದೆವು.ಪ್ರಜಾಪ್ರಭುತ್ವ ಮತ್ತು ಸುಪ್ರೀಂ ಕೋರ್ಟ್ ನ ಘನೆತೆಯನ್ನು ಎತ್ತಿ ಹಿಡಿಯಲು ಅನಿವಾರ್ಯವಾಗಿ ದೇಶದ ಜನರ ಮುಂದೆ ಬಂದಿದ್ದೇವೆ ಎಂದು ನ್ಯಾಯ ಮೂರ್ತಿ ಚೆಲುಮೇಶ್ವರ ತಿಳಿಸಿದರು.