ಟ್ರಂಪ್ , ಪುಟಿನ್ ರನ್ನು ಹಿಂದಿಕ್ಕಿದ ಪ್ರಧಾನಿ ಮೋದಿ: ನಂ. 1 ಸ್ಥಾನ ಯಾರಿಗೆ ಗೊತ್ತೇ ?
ಜಿ ಐ ಎ ಜಾಗತಿಕ ನಾಯಕರ ವಾರ್ಷಿಕ ಸಮೀಕ್ಷೆ

ಹೊಸದಿಲ್ಲಿ,ಜ.12 : ಗಾಲ್ಲಪ್ ಇಂಟರ್ ನ್ಯಾಷನಲ್ ಅಸೋಸಿಯೇಶನ್ ನಡೆಸಿದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮೂರು ಅಗ್ರಗಣ್ಯ ನಾಯಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಮೊದಲ ಸ್ಥಾನವನ್ನು ಜರ್ಮನಿಯ ಚಾನ್ಸಲರ್ ಏಂಜಲಾ ಮರ್ಕೆಲ್ ಹಾಗೂ ಎರಡನೇ ಸ್ಥಾನವನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮೆಕ್ರಾನ್ ಗಳಿಸಿದ್ದರೆ, ಮೂರನೇ ಸ್ಥಾನವನ್ನು ಪ್ರದಾನಿ ಮೋದಿ ಗಳಿಸಿದ್ದಾರೆ.
ಅಂದ ಹಾಗೆ ಈ ಸಮೀಕ್ಷೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಕ್ಸಿ ಜಿನ್ಪಿಂಗ್, ಬ್ರಿಟಿಷ್ ಪ್ರಧಾನಿ ತೆರೆಸಾ ಮೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮೋದಿ ಹಿಂದಿಕ್ಕಿದ್ದಾರೆ. ಒಟ್ಟು 50 ದೇಶಗಳ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಸ್ವಿರ್ಜಲ್ಯಾಂಡ್ ನ ದಾವೋಸ್ ನಲ್ಲಿ ಜನವರಿ 22 ಹಾಗೂ 23ರಂದು ನಡೆಯಲಿರುವ ವರ್ಲ್ಡ್ ಇಕನಾಮಿಕ್ ಫೋರಂ ಶೃಂಗಸಭೆಯಲ್ಲಿ ಭಾಗವಹಿಸಲು ಸದ್ಯವೇ ಪ್ರಧಾನಿ ಮೋದಿ ತೆರಳಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮೀಕ್ಷಾ ವರದಿ ಅವರ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆಯೆಂದು ಹೇಳಲಾಗುತ್ತಿದೆ.