ತತ್ವಜ್ಞಾನದ ತಂತ್ರಜ್ಞಾನದಿಂದ ದೇಶದ ಸರ್ವಾಂಗೀಣ ಬೆಳವಣಿಗೆ: ಶಕುಂತಳಾ ಶೆಟ್ಟಿ
ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಉದ್ಘಾಟನೆ

ಪುತ್ತೂರು, ಜ. 12: ಯುವ ಶಕ್ತಿ ಸದಾ ಜ್ಞಾನದಾಹ ಹೊಂದಿರಬೇಕು. ನಮ್ಮ ದಿನ ನಿತ್ಯದ ಎಲ್ಲಾ ಚಟುವಟಿಕೆಗಳಲ್ಲಿ ವೈಜ್ಞಾನಿಕ ತತ್ವ ಸಿದ್ಧಾಂತಗಳು ಅಡಗಿದ್ದು, ತತ್ವಜ್ಞಾನವನ್ನೊಳಗೊಂಡ ತಂತ್ರಜ್ಞಾನ ಮತ್ತು ಸುಜ್ಞಾನದೊಂದಿಗಿರುವ ವಿಜ್ಞಾನವು ದೇಶದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೈನಂದಿನ ಜೀವನದಲ್ಲಿ ಬಳಸಲ್ಪಡುವ ನಾನಾ ರೀತಿಯ ವಸ್ತುಗಳಿಗೆ ವೈಜ್ಞಾನಿಕ ಆವಿಷ್ಕಾರಗಳೇ ಪ್ರಮುಖ ಕಾರಣ ಎಂದ ಅವರು ನಮ್ಮ ಆವಿಷ್ಕಾರಗಳಲ್ಲಿ ಕೆಡುಕುಗಳು ಕಡಿಮೆ ಇರಬೇಕು, ಅದು ಸಮಾಜದ ಬೆಳವಣಿಗೆಗೆ ಪೂರಕವಾಗುವಂತಿರಬೇಕು ಎಂದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಚಟುವಟಿಕೆ ಗಳೂ ಪುನರಾವರ್ತನೆಗೊಂಡಾಗ ಅನ್ವೇಷಣೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ಕ್ರಿಯಾಶೀಲತೆ, ಸಂವಹನ ಕಲೆ, ವೈಜ್ಞಾನಿಕ ದೃಷ್ಟಿಕೋನ ಮುಂತಾದವುಗಳನ್ನು ಅಳವಡಿಸಿಕೊಂಡಾಗ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅವರು ಮಾತನಾಡಿದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ್ ಕೆ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಡೀನ್ ಪ್ರೊ. ಉದಯ ಕೆ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಎಸ್ ಡಿ’ಸೋಜ ನಿರೂಪಿಸಿದರು.
ವಿಜ್ಞಾನ ಮೇಳದಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಯಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ ಗಣೇಶ್ ಸಂಜೀವ್ ಅವರು ’ಕೃತಕವಿಕಿರಣ ವಸ್ತುಗಳು ಮತ್ತು ಅವುಗಳ ಉಪಯೋಗಗಳು’ ಕುರಿತು ಉಪನ್ಯಾಸ ನೀಡಿದರು. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ ಜೆ ದಿನಕರ ಅಡಿಗ ಅವರು ’ತೋಟಗಾರಿಕಾ ಅಧ್ಯಯನದಲ್ಲಿ ಸಂಶೋಧನೆಗಳಿಗೆ ಅವಕಾಶಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.







