ಅಹಿತಕರ ಘಟನೆಗಳ ಬಗ್ಗೆ ಸಮಗ್ರ ತನಿಖೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು, ಜ.12: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಈ ಬಾರಿ ಮತೀಯ ಶಕ್ತಿಗಳು ನಡೆಸಿದ ಘಟನೆಯನ್ನು ಕೇವಲ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದಮಾತ್ರಕ್ಕೆ ಸುಮ್ಮನಾಗುವುದಿಲ್ಲ. ಇಂತಹ ಘಟನೆಗಳು ಯಾಕಾಗಿ ನಡೆಯುತ್ತಿವೆ. ಯಾರು ಬೆಂಬಲಿಸುತ್ತಾರೆ ಎಂಬ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಮೂರು ಪ್ರಕರಣಗಳ ತನಿಖೆಯನ್ನು ಎಸಿಪಿ ಮಟ್ಟದ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದರು.
ಇಂತಹ ಘಟನೆಗಳು ಮರುಕಳಿಸಬಾರದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗಹ ಸಚಿವರು ಈಗಾಗಲೇ ಸೂಚನೆ ನೀಡಿದ್ದಾರೆ. ಇದನ್ನು ಅನುಸರಿಸಿ ತನಿಖೆಯ ಆಳಕ್ಕೆ ಹೋಗುತ್ತೇವೆ. ದೀಪಕ್ ರಾವ್ ಹತ್ಯೆ ಪ್ರಕರಣದ ತನಿಖೆಯನ್ನು ಎಸಿಪಿ ಮಂಜುನಾಥ ಶೆಟ್ಟಿ, ಬಶೀರ್ ಹತ್ಯೆಯ ತನಿಖೆಯನ್ನು ಎಸಿಪಿ ವೆಲೆಂಟೈನ್ ಡಿಸೋಜಾ ಹಾಗೂ ಮುಬಶೀರ್ ಕೊಲೆ ಯತ್ನ ಘಟನೆಯ ತನಿಖೆಯನ್ನು ಸುರತ್ಕಲ್ ಎಸಿಪಿ ನಡೆಸಲಿದ್ದಾರೆ. ಈ ಮೂರು ಮಂದಿಯಿಂದ ಕೂಲಂಕಷ ವರದಿಯನ್ನು ತರಿಸಿಕೊಳ್ಳಲಾಗುತ್ತದೆ. ಭವಿಷ್ಯದಲ್ಲಿ ಇಂತಹ ಶಾಂತಿ ಕದಡುವ ಘಟನೆಗಳಿಗೆ ಇತಿಶ್ರೀ ಹಾಕಲು ನಿರ್ಧರಿಸಾಗಿದೆ ಎಂದು ಆಯುಕ್ತರು ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಕಸ್ಟಡಿಗೆ
ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಬಂಧನ ಕಾರ್ಯಾಚರಣೆ ವೇಳೆ ಪೊಲೀಸ್ ಗುಂಡೇಟಿನಿಂದ ಗಾಯಗೊಂಡು ಇಬ್ಬರು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಚೇತರಿಸುತ್ತಿದ್ದು, ಇನ್ನು ಒಂದೆರಡು ದಿನದಲ್ಲಿ ಆರೋಪಿಗಳಾದ ಪಿಂಕಿ ನವಾಝ್ ಮತ್ತು ರಿಝ್ವಾನ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲಾಗುವುದು. ಈಗಾಗಲೇ ಬಂಧಿತ ಇಬ್ಬರು ಆರೋಪಿಗಳಾದ ನೌಷಾದ್ ಮತ್ತು ಮುಹಮ್ಮದ್ ಇರ್ಷಾದ್ ಇವರನ್ನು ಒಂದು ವಾರ ಕಾಲ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ನಡೆಸಲಾಗಿದೆ. ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಇನ್ನು ಉಳಿದ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು. ಆರೋಪಿಗಳು ನೀಡಿದ ಮಾಹಿತಿಗಳನ್ನು ತಾಳೆ ಮಾಡಿ ನೋಡಿದ ಬಳಿಕವೇ ಹತ್ಯೆ ಘಟನೆಗೆ ನಿರ್ದಿಷ್ಟ ಕಾರಣ ಗೊತ್ತಾಗಲಿದೆ ಎಂದರು.
ಪೊಲೀಸರ ವಿರುದ್ಧವೂ ಕ್ರಮ
ಕೊಟ್ಟಾರ ಚೌಕಿಯಲ್ಲಿ ಅಹ್ಮದ್ ಬಶೀರ್ ಹತ್ಯೆ ಘಟನೆಯ ಸಿಸಿ ಕ್ಯಾಮರಾ ದಶ್ಯವನ್ನು ತನಿಖೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಆ ದಶ್ಯಗಳು ಮಾಧ್ಯಮಕ್ಕೆ ಸೋರಿಕೆಯಾಗಿವೆ. ಈ ಬಗ್ಗೆ ಖಾಸಗಿ ಕಟ್ಟಡದ ಮಾಲೀಕರನ್ನು ವಿಚಾರಣೆ ನಡೆಸಲಾಗಿದೆ. ಅವರು ತಾನು ಯಾರಿಗೂ ಆ ದಶ್ಯಾವಳಿಗಳನ್ನು ನೀಡಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಇಲಾಖೆಯ ಸಿಬ್ಬಂದಿ ಸೋರಿಕೆ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕವಾಯತು ನಡೆಸಲು ಮೈದಾನದ ಬೇಡಿಕೆ
ನಗರ ಸಶಸ್ತ್ರ ಮೀಸಲು ಪಡೆಗೆ ತರಬೇತಿ, ಕವಾಯತು ನಡೆಸಲು ಪ್ರತ್ಯೇಕ ಮೈದಾನ ಇಲ್ಲ. ಹಾಗಾಗಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮೈದಾನ ಒದಗಿಸು ವಂತೆ ಗೃಹ ಸಚಿವರನ್ನು ಕೋರಲಾಗಿದೆ ಎಂದು ಕಮಿಷನರ್ ಟಿ.ಆರ್.ಸುರೇಶ್ ಈ ಸಂದರ್ಭ ತಿಳಿಸಿದರು.
ಕ್ಷಿಪ್ರ ಕಾರ್ಯಪಡೆ ಸನ್ನದ್ಧ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ ಸುಮಾರು 22 ಮಂದಿ ಸಿಬ್ಬಂದಿಗೆ ಕಮಾಂಡೋ ಮಾದರಿಯ ತರಬೇತಿಯನ್ನು ಇಲ್ಲೇ ನೀಡಲಾಗುತ್ತಿದೆ. ಈ ಪಡೆ ತುರ್ತು ಸಂದರ್ಭಗಳಲ್ಲಿ ಅಹಿತಕರ ಘಟನೆ ನಿಯಂತ್ರಿಸಲು ನೆರವಾಗಲಿದೆ ಎಂದು ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದರು.
ರಾಜ್ಯದ ಆಯ್ದ ಜಿಲ್ಲೆಗಳಿಗೆ ಅತ್ಯಾಧುನಿಕ ಕ್ಯಾಮರಾ ಹಾಗೂ ಡ್ರೋನ್ ಅಳವಡಿಸಿದ ಸುಸಜ್ಜಿತ ವಾಹನವನ್ನು ನೀಡಲಾಗಿದೆ. ಇದನ್ನು ಮಂಗಳೂರಿಗೂ ನೀಡುವಂತೆ ಇಲಾಖೆಯನ್ನು ಕೋರಲಾಗುವುದು ಎಂದು ಅವರು ಹೇಳಿದರು.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮೇಯರ್ ಕವಿತಾ ಸನಿಲ್, ಮಂಗಳೂರು, ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.







